ಪುಟ:ಸ್ವಾಮಿ ಅಪರಂಪಾರ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಸ್ವಾಮಿ ಅಪರಂಪಾರ ೧೨೧

                             * * *   
  ಅಪ್ಪಂಗಳದಲ್ಲಿ ಗಂಗಮ್ಮ ಗೋಳಾಡಿದಳು:
  "ಅರಮನೆ ರಾಮಾಯಣ ಮುಗಿದಂತಾಯಿತಲ್ಲೇ?ಮಂಗಳ ಹಾಡತಾ ಇದಾರಲ್ಲೇ?ನಮ್ಮ ಅಳಿಯ ಇನ್ನೂ ಬರಲಿಲ್ಲವಲ್ಲೇ!..."
  ರಾಜಮ್ಮಾಜಿ ತಾಯಿಯನ್ನು ಸಮಾಧಾನಪಡಿಸಿದಳು:
  "ಅಳಬೇಡವಮ್ಮ,ಅಳಬೇಡವಮ್ಮ."
                             * * *
  ಹಾಲೇರಿ ಅರಮನೆಯಲ್ಲಿದ್ದ ದೂರದ ರಾಜ ಸಂಬಂಧಿಗಳು ಮಡಕೇರಿ ಕೋಟೆ ಇಂಗ್ಲಿಷರ ಕೈವಶವಾದೊಡನೆ ಊರು ಬಿಟ್ಟೋಡಿದ್ದರು.
  ಜಹಗೀರು ನಿರ್ಜನವಾಗಿತ್ತು.
  ಇನ್ನೂರೈವತ್ತು ವರ್ಷಗಳಿಗೆ ಹಿಂದೆ ಜಂಗಮ ವೇಷಧಾರಿಯೊಬ್ಬನ ಬಡ ಕುಟೀರವಾಗಿದ್ದು ಕ್ರಮೇಣ ರೂಪಾಂತರ ಹೊಂದಿದ ಸೌಧ ಆ ಅರಮನೆ. 
  ಅದರ ಆವಾರದಲ್ಲಿದ್ದ ಕೊಳದ ತಟದಲ್ಲಿ,ಜಂಗಮನೊಬ್ಬ ಕಣ್ಣು ಮುಚ್ಚಿ ಶಿವಧ್ಯಾನದಲ್ಲಿ ನಿರತನಾಗಿದ್ದ.ಆತ ಅಪರಂಪಾರ.
  ಧ್ಯಾನ ಸಮಾಧಿಯಿಂದ ಸ್ವಾಮಿಗಳು ಎಚ್ಚರಗೊಳ್ಳುವುದನ್ನೆ ಕಾಯುತ್ತ,ಶಿಷ್ಯ ಸಿದ್ಧಲಿಂಗ ತುಸು ದೂರದಲ್ಲಿ ಕುಳಿತಿದ್ದ.
  ಬಿಸಿಲು ನೆತ್ತಿಗೇರಿತು.ಸೂರ್ಯ ಪಡುವಣಕ್ಕಿಳಿದ.ತಾಪ ಕಡಿಮೆಯಾಯಿತು. ಸ್ವಾಮಿ ಅಪರಂಪಾರ ಮಾತ್ರ ನಿಶ್ಚಲನಾಗಿ ಕುಳಿತೇ ಇದ್ದ.
  ಸಿದ್ದಲಿಂಗ ತನ್ನಷ್ಟಕ್ಕೆ ಅಂದುಕೊಂಡ:
  "ತಪಸ್ಸಿಗೇ ಕೂತರೋ ಹ್ಯಾಗೆ? ಮಹಾದೇವ ಪ್ರತ್ಯಕ್ಷನಾಗಿ ವರ ಕೊಟ್ಟ ಹೊರತು ಇವರು ಏಳೋ ಹಾಗೆ ಕಾಣಲಿಲ್ಲ."
                              ೪೨
  ಜಟೆಗಟ್ಟಿದ ತಲೆಗೂದಲನ್ನೂ ಮೀಸೆ-ಗಡ್ಡಗಳನ್ನೂ ನಾಪಿತನ ಅಲಗಿಗೆ ಬಲಿಕೊಟ್ಟು ಕೊಳದಲ್ಲಿ ಮಿಂದು,ಮಾಲಿನ್ಯ ಕಳೆದು,ವಿಭೂತಿ ಧಾರಣೆ ಮಾಡಿ, ಅಪರಂಪಾರಸ್ವಾಮಿ ನುಡಿದ:
  "ಒಂದು ಕೆಲಸ ಆಯಿತು,ಸಿದ್ಧಲಿಂಗ,ಇನ್ನೊಂದು ಉಳಿದಿದೆ.ನಂಜರಾಜಪಟ್ಣಕ್ಕೆ ಹೋಗಿ ಶಿವಾಚಾರ್ಯಸ್ವಾಮಿಗಳ ದರ್ಶನ ಪಡೆಯೋದು."
  ಅಪರಂಪಾರನ ಬದುಕಿನಲ್ಲಿ ಇದೊಂದು ಮಹತ್ವದ ಘಟ್ಟ;ಅಚಲ ನಿರ್ಧಾರವೊಂದನ್ನು ಆತ ಕೈಗೊಂಡಿದ್ದಾನೆ: ಮುಖದಲ್ಲಿ ಅಪೂರ್ವ ಪ್ರಶಾಂತತೆ ಮನೆಮಾಡಿದೆ–ಎಂಬುದನ್ನು ಸಿದ್ಧಲಿಂಗನಾಗಲೇ ಮನಗಂಡಿದ್ದ.ಶಿವಾಚಾರ್ಯಸ್ವಾಮಿಗಳ ಪ್ರಸ್ತಾಪದಿಂದ ಆತ ಚಕಿತನಾದ.
  "ಗುರುಗಳು ನಿನ್ನೆ ರಾತ್ರಿ ಕನಸಿನಲ್ಲಿ ಕಾಣಿಸಿಕೊಂಡರು. ವಿಶ್ರಾಂತಿ ತಗೋತಾ ಇದ್ದರು.    ಮಲಗಿದ್ದಲ್ಲಿಂದಲೇ ಸನ್ನೆಮಾಡಿ ನಮ್ಮಿಬ್ಬರನ್ನೂ ಕರೆದರು,ಎಂದ ಸಿದ್ದಲಿಂಗ."
  ಅಪರಂಪಾರನೆಂದ: