ಪುಟ:ಸ್ವಾಮಿ ಅಪರಂಪಾರ.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ೧೨೦ ಸ್ವಾಮಿ ಅಪರಂಪಾರ

  ಮಂದಹಾಸ ಸೂಸುತ್ತ ಫ್ರೇಸರನೆಂದ: 
 "ರಾಜಾಧಿರಾಜ ಚಿಕವೀರರಾಜೇಂದ್ರರು ನಾಳೆ ವೇಲೂರಿಗೆ ಪರಿವಾರ ಸಹಿತ                                ಹೊರಡುತ್ತಾರೆ!" 
  ಬೋಪಣ್ಣನ ಮುಖ ಹುಣ್ಣಿಮೆಯ ಚಂದ್ರನಾಯಿತು.
 
                           ೪೧
                   
  ಸತ್ತ ಬಳಿಕ ಶವಸಂಸ್ಕಾರ.
  ಕಣ್ಣೆವೆಗಳು ಕೊನೆಯ ಬಾರಿ ಮುಚ್ಚಿದಾಗ ಅಳು ಮಂಜುಗಡ್ಡೆಯಾದರೂ ಶವದ ಮೆರೆವಣಿಗೆ ಆರಂಭವಾದೊಡನೆ, ಕಿವಿಯೊಡೆಯುವಂತೆ ಎದೆ ಬಿರಿಯುವಂತೆ ಆರ್ತನಾದ.  
  ಹಾಗಿತ್ತು. ಚಿಕವೀರರಾಜನ ನಿರ್ಗಮನದ ದೃಶ್ಯ.
  ಆ ಘಳಿಗೆಯಲ್ಲೂ ಆತ ಸ್ಥೈರ್ಯ ಕಳೆದುಕೊಳ್ಳಲಿಲ್ಲ.ಬಿದ್ದಂಡ ಸೋಮಯ್ಯನೂ ಹೆಬ್ಬಾಲೆ ತಿಮ್ಮಣ್ಣಗೌಡನೂ ಕಾರ್‍ಯಕಾರ ಐಯಣ್ಣನೂ ಇತರ ಇನ್ನೂರ ಐವತ್ತು ಜನರೂ ಅರಸನನ್ನು ಹಿಂಬಾಲಿಸಿದರು. ಸ್ವಾಮಿನಿಷ್ಟರಾದ ಉಳಿದ ಪ್ರಮುಖರು ಯಾರೂ ತನ್ನೊಡನೆ ಬರಕೂಡದೆಂದೂ ಅವರು ಕೊಡಗಿನಲ್ಲೇ ಇರಬೇಕೆಂದೂ ಚಿಕವೀರರಾಜ ಆದೇಶವಿತ್ತ.
  ದುಃಖ ದುರ್ಭರವಾಗಿದ್ದರೂ ರಾಣಿ ಗೌರಮ್ಮ.ಮುಖಬಾಡಿದ ಮಗಳನ್ನು ತೋಳಿನಿಂದ ಬಳಸಿ, ಗಂಭೀರವದನೆಯಾಗಿ ಮೇನೆಯಲ್ಲಿ ಕುಳಿತಳು.
  ಬೋಪಣ್ಣನಾಗಲೀ, ಲಕ್ಷ್ಮೀನಾರಾಯಣನಾಗಲೀ ರಾಜನೆದುರು ಬರಲಿಲ್ಲ.ಬೋಪು ಬಸವನನ್ನು ಅರಸುತ್ತಿದ್ದ.ಆತನ ಬಿಸಿ ರಕ್ತ ಅವನಿಗೆ ಬೇಕಾಗಿತ್ತು.
  ಅರಸನಿಂದ ಆಗಲೇ ನಿರೂಪ ತೆಗೆದುಕೊಂಡಿದ್ದ ಪುಟ್ಟಬಸವ ಜನಸಂದಣಿಯಿಂದ ಮಾಯವಾಗಿದ್ದ.
  ದಾರಿಯುದ್ದಕ್ಕೂ ಎರಡೂ ಬದಿಗಳಲ್ಲಿ ಪ್ರಜೆಗಳು ಕಿಕ್ಕಿರಿದು ನಿಂತು, ತಬ್ಬಲಿಗಳಾದೆವೆಂದು ತಲೆ ಕೂದಲು ಕಿತ್ತು ಕಿತ್ತು ಪ್ರಲಾಪಿಸುತ್ತಿದ್ದರು.
  ಅದನ್ನು ನೋಡಿ, "ಇಂಥ ಪ್ರೀತಿಗೆ ಪ್ರತಿಯಾಗಿ ನಾ ಏನು ಕೊಟ್ಟೆ?" ಎಂದು ಚಿಕವೀರರಾಜ ದುಃಖಿಸಿದ.
  ಹನಿಗೂಡಿದ ಕಣ್ಣುಗಳಿಂದ,ಪ್ರಜೆಗಳ ಪ್ರಣಾಮಗಳಿಗೆ ಪ್ರತಿವಂದನೆ ಮಾಡುತ್ತ, ಅವನು ಮತ್ತೆ ಮತ್ತೆ ಅ೦ದ:
  "ನಾವು ಬೇಗನೆ ಬಂದುಬಿಡತೀವಿ-ಬಂದುಬಿಡತೀವಿ."
                             * * *
  ಶ್ರೀರಂಗಪಟ್ಟಣದಲ್ಲಿ ಕಾಸ್ಸಾ ಮೇಜರನೆದುರು ಚನ್ನಬಸಪ್ಪ ಕೂಗಾಡಿದ:
  "ಇನ್ನೂ ಯಾಕೆ ತಡಮಾಡತೀರಿ?ಕುದುರೆಗಳಿಲ್ಲವಾ?ಸಾರೋಟಿಲ್ಲವಾ?ಮೇನೆ ಗಳಿಲ್ಲವಾ? ಯಾವತ್ತು ಹೊರಡೋದು ನಾವು?ರಾಣಿಯಿಲ್ಲದೆ ಖಾಲಿ ಪಟ್ಟಕ್ಕೇ ಅಭಿಷೇಕ ಮಾಡತೀರ?”
  ಕಾಸ್ಸಾ ಮೇಜರ್ ಸಂತೈಸುತ್ತ ಅಂದ:
  "ನೀವು ಶಾಂತವಾಗಿರಬೇಕು.ಸಕಾಲದಲ್ಲಿ ಸರಿಯಾದ್ದನ್ನು ಮಾಡ್ತೇವೆ."