ಪುಟ:ಸ್ವಾಮಿ ಅಪರಂಪಾರ.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರ೦ಪಾರ

೧೫೯

ಮರೆಯಲಡಗಿರ್ದ ಬೆಳಗಿನಂತೆ, ವೈರಿ ಶಿಬಿರದ ಮೇಲೆ ನಮ್ಮ ದಂಡು ಎರಗುತದೆ. ಈಗ
ನಾವು ತ೦ಗಾಳಿ ಪರಿಮಳದೊಡಗೂಡಿ ಸುಳಿವಂತೆ ಸುಳಿಯುತೇವೆ. ಮುಂದೆ ಬಿರುಗಾಳಿ
ಬೀಸಿ ಮರ ಮುರಿವಂತೆ ಮುತ್ತುತೇವೆ. ಕಪಟಿಯಾದ ಧೂರ್ತನಾದ ವೈರಿ ನಮ್ಮ ಮನೆ
ಮಠಗಳ ಮೇಲೆ ಈಗ ಸ್ವಾರಿ ಮಾಡುತಿದಾನೆ. ಆ ಆಕ್ರಮಣಕಾರನನ್ನು ನಾವು ಸದೆ
ಬಡೆಯಬೇಕು. ನಮ್ಮ ಪಕ್ಷದಲ್ಲಿ ಮಹಾದೇವನಿದ್ದಾನೆ. ಅವರ ಪಕ್ಷದಲ್ಲಿ ಸೈತಾನ ಮಾತ್ರ.
ಇದು ಸುರಾಸುರರೊಳಗಿನ ಯುದ್ಧ. ನಾವು ಗೆಲ್ಲುತೇವೆ. ಅಸುರರು ಮಣ್ಣು ಮುಕ್ಕು
ತಾರೆ. ಎಲ್ಲರೂ ಜಯಘೋಷಮಾಡಿ. ಹರಹರ ಮಹಾದೇವ!"
"ಹರಹರ ಮಹಾದೇವ !"
ಸಹಸ್ರ ಕಂಠಗಳಿಂದ ಹೊರಟ ಘೋಷ ಗಗನವನ್ನು ಮುಟ್ಟಿತು.
ಸ್ವಾಮಿಯನ್ನು ಹೋರಾಟದ ಸಂಕೇತವನ್ನಾಗಿ ಮಾಡಿ ಯೋಧರೆಂದರು:
"ಅಪರಂಪಾರಸ್ವಾಮಿಯವರಿಗೆ ಜಯವಾಗಲಿ!"
ಅಪರಂಪಾರನೆಂದ :
"ಹೇಳಿರಿ! ಚಿಕವೀರರಾಜೇಂದ್ರ ಒಡೆಯರಿಗೆ ಜಯವಾಗಲಿ."
ಸಹಸ್ರ ಕಂಠಗಳು ಆ ಘೋಷವನ್ನು ಪುನರುಚ್ಚರಿಸಿದುವು.

                            ೫೭

ಅಶ್ವಾರೂಢ ಅಪ್ಪಯ್ಯನ ನಾಯಕತ್ವದಲ್ಲಿ ದಂಡು ಧೂಳೆಬ್ಬಿಸುತ್ತ ಸಾಗಿತು.
ಅದರ ಹಿಂದೆ ತುಸು ಅಂತರದಲ್ಲಿ ಮೂರು ಕುದುರೆಗಳು ನಡೆದುವು. ಒಂದರ ಮೇಲೆ
ಅಪರಂಪಾರನಿದ್ದ. ಅವನ ಇಕ್ಕೆಲಗಳಲ್ಲಿ ಶಂಕರಪ್ಪ ಮತ್ತು ಮಂಜಣ್ಣನಿದ್ದರು.
ಬಿರುಗಣ್ಣಿನಿಂದ ನೇರ ನೋಡುತ್ತ, ಕುದುರೆಯ ಮೇಲೆ ನೆಟ್ಟಗೆ ಮಿಸುಕದೆ ಕುಳಿತಿದ್ದ
ಮಂಜಣ್ಣ ಶಂಕರಪ್ಪನಿಗೆ ವಿಚಿತ್ರವಾಗಿ ಕಂಡ. ಹಾರಂಗಿಯನ್ನು ಕುರಿತು ಅಪರಂಪಾರ
ಕೇಳಿದ ಪ್ರಶ್ನೆಗಳಿಗೆಲ್ಲ ಮಂಜಣ್ಣ ಚುಟುಕು ಉತ್ತರಗಳನ್ನಿತ್ತ.
'ಬಹಳ ಮಿತಭಾಷಿ ಈತ. ಸಮರ್ಥನಂತೆ ಕಾಣುತಿದಾನೆ' ಎಂದುಕೊಂಡ ಅಪರಂಪಾರ.
ಬಿಸಿಲು ನೆತ್ತಿಗೇರಿತು. ದಂಡು ಬಹಳ ಮುಂದೆ ಸಾಗಿತು.
ಮಂಜಣ್ಣನೆಂದ :
"ಅಕಾ, ಓ ಅಲ್ಲಿ ಬಲಕ್ಕೆ ಕಿರುದಾರಿ ಕಾಣತದಲ್ಲ ಅಲ್ಲಿ ನಾವು ಹೊರಳಬೇಕು.”
“ಅಪ್ಪಯ್ಯನವರು ಹೇಳಿದ ಕೆರೆಗೆ ಆ ದಾರಿ ಹೋಗತದೆ. ಅಲ್ಲವಾ?” ಎಂದು
ಶಂಕರಪ್ಪ ಕೇಳಿದ.
"ಹ್ಞ."
ಮಂಜಣ್ಣ ಮೊದಲು ತಿರುಗಿದ. ಅವನ ಹಿಂದೆ ಅಪರಂಪಾರನ ಕುದುರೆ. ಕೊನೆಯ
ದಾಗಿ ಶಂಕರಪ್ಪ.
"ಎಂಥ ಹಸಿರು ! ಎಷ್ಟೊಂದು ಕಾಡು ಹೂಗಳು! ಸ್ವಾಗತ ಸ್ವಾಗತ ಅಂತ ಒಂದೇ
ಸಮನೆ ಉಲಿಯುತಿವೆಯಲ್ಲ ಹಕ್ಕಿಗಳು!" ಎಂದ, ಅಪರಂಪಾರಸ್ವಾಮಿ.
"ದಾರಿಯಲ್ಲಿ ಧೂಳಿಲ್ಲ. ಬಹಳಷ್ಟು ಜನ ದಿನಾ ಇಲ್ಲಿಗೆ ಬರೋದು ಕಾಣೆ” ಎಂದ.
ಶಂಕರಪ್ಪ.