ಪುಟ:ಸ್ವಾಮಿ ಅಪರಂಪಾರ.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಸ್ವಾಮಿ ಅಪರಂಪಾರ ೨೦೧

ಸಿಟ್ಟಿನಿಂದ ಅಪರಂಪಾರನ ಮುಖ ಗಂಟಿಕ್ಕಿತು. ಆ ದಿನ ಆತ ಮತ್ತೇನನ್ನೂ ಮಾತನಾಡಲಿಲ್ಲ.

...ಒಂದೆರಡು ವರ್ಷಗಳ ಅನಂತರ ಕ್ಯಾಂ‍ಪ್‍ಬೆಲ್ ರಜದ ಮೇಲೆ ಇಂಗ್ಲೆಂಡಿಗೆ ಹೊರಟ. ಆತನಿಲ್ಲದ ಅವಧಿಯಲ್ಲಿ ವೈದ್ಯಕೀಯ ಅಧಿಕಾರಿಯಾಗಿದ್ದವನು ಸೆರೆಮನೆಯ ಕಡೆಗೆ ಸಾಧಾರಣವಾಗಿ ಬರುತ್ತಿರಲಿಲ್ಲ. ಬಂದರೂ ಅಪರಂಪಾರನನ್ನು ಮಾತನಾಡಿಸುತ್ತಿರಲಿಲ್ಲ.

ಅಪರಂಪಾರನಿಗೆ ಇದು ವನವಾಸದೊಳಗಿನ ಅಜ್ಞಾತವಾಸವಾಯಿತು.

ಒಂದು ವರ್ಷ ಬಿಟ್ಟು ಹಿಂತಿರುಗಿದ ಕ್ಯಾಂಪ್‍ಬೆಲ್ ತನ್ನ ತಾಯ್ನಾಡಿನಿಂದ ಅಪರಂಪಾರನಿಗಾಗಿ ವಾರ್ತೆಯನ್ನು ತಂದ. ಅದು ಚಿಕವೀರರಾಜನ ವಿಲಾಯತಿ ವಾಸ್ತವ್ಯವನ್ನು ಕುರಿತದ್ದು.

"ನನ್ನ ದೇಶದಲ್ಲಿ ನಿಮ್ಮ ರಾಜನನ್ನು ಎಲ್ಲರೂ ಹೊಗಳುವವರೇ."

ಕ್ಯಾಂಪ್‍ಬೆಲ್ ನೀಡಿದ ವಿವರಗಳೆಲ್ಲ ಕಹಿಯಾಗಿದ್ದುವು. ಮುಖದ ಮೇಲೆ ಯಾವ ಭಾವಗಳನ್ನೂ ಪ್ರಕಟಿಸದೆ, ವೈದ್ಯನಾಡಿದುದನ್ನು ಅಪರಂಪಾರ ಆಲಿಸಿದ.

"ಆತ ಅಸ್ವಸ್ಥನಾಗಿ ತೀರಿಕೊಂಡ. ನಾನು ವಾಪಸು ಬಂದ ಜಹಜಿನಲ್ಲೇ ಆತನ ಕಿರೀಟವನ್ನೂ ಖಡ್ಗವನ್ನೂ ತಂದರು."

ತನ್ನ ಮೌನವನ್ನು ಮುರಿದು, ಒಮ್ಮೆಲೆ ಅಪರಂಪಾರನೆಂದ :

"ವೈದ್ಯರೇ, ಬಹಳ ಹೇಳಿದಿರಿ. ಸಾಕುಮಾಡಿ !"

ಕ್ಯಾಂಪ್‍ಬೆಲ್‍ಗೆ ಆಶ್ಚರ್ಯವಾಯಿತು. ಬಳಿಕ, 'ಇದು ನೋಂದ ಜೀವ. ಒಳಗೆ ಒದ್ದಾಡುತಿದೆ. ಈತ ಮಾತನಾಡಲೊಲ್ಲ' ಎಂದುಕೊಳ್ಳುತ್ತ ಆತ ತನ್ನ ದಾರಿ ಹಿಡಿದ.

ಅದು ಅತೀವವಾದ ಮಾನಸಿಕ ಸಂಕಟ. ಗತಕಾಲದ ಅಸಂಖ್ಯ ಘಟನೆಗಳು, ಅಪರಂಪಾರನನ್ನು ಮುಸುಕಿದ್ದ ಗಾಢಾಂಧಕಾರದಲ್ಲಿ ವಿಕೃತ ಸ್ವರಗಳನ್ನು ಹೊರಡಿಸುತ್ತ ಹುಚ್ಚೆದ್ದು ಕುಣಿದುವು.

"ನಾ ತಾಳಲಾರೆ, ತಾಳಲಾರೆ” ಎಂದು ಅವನ ಹೃದಯ ಗೋಗರೆಯಿತು. ಒಂದು ವಚನ ಅಪರಂಪಾರನ ನಾಲಗೆಯಿಂದ ಹೊರ ಹೊಮ್ಮಿತು :

"ಅರಿಯಲಿಲ್ಲದ ಅರಿವು, ಮರೆಯಲಿಲ್ಲದ ಮರಹು 
 ನೋಡಲಿಲ್ಲದ ಬೆರಗು, ನಿಂದುದು ಕೂಡಲ ಚೆನ್ನಸಂಗಯ್ಯ ಲಿಂಗೈಕ್ಯಂಗೆ
 ಬೆಳಗು ಕತ್ತಲೆಯ ನುಂಗಿ ಒಳಗೆ ನಾನೊಬ್ಬನೇ ಆದೆ. 
 ಕಾಂಬ ಕತ್ತಲೆಯ ಕಳೆದುಳಿದು ನಿಮಗಾನು ಗುರಿಯಾದೆ."
                          ೭೧

ಲೀಹಾರ್ಡಿಯ ಬದಲು ಕೊಡಗಿಗೆ ಹೊಸ ಆಡಳಿತಗಾರ ಬಂದ. ಪೊನ್ನಪ್ಪ ವೃದ್ಧಾಪ್ಯದಿಂದ ಸತ್ತ; ಅಷ್ಟೊಂದು ವೃದ್ಧನಲ್ಲದ ಬೋಪಣ್ಣನೂ ಅವನ ದಾರಿ ಹಿಡಿದ. ವೆಸ್‍ರಾಯ್‍ಯ ಆದೇಶ ಗವರ್ನರರ ಮೂಲಕ ಆಡಳಿತಗಾರನನ್ನು ತಲಪಿತು: