ಪುಟ:ಸ್ವಾಮಿ ಅಪರಂಪಾರ.pdf/೮೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿದೆ


೮೪ ಸ್ವಾಮಿ ಅಪರಂಪಾರ

   ಪ್ರತಿಹಾರರು ಮುಂದಕ್ಕೆ ಓಡಿದರು. ಅಪರಂಪಾರ ತನ್ನ ನಡಿಗೆಯನ್ನು ಕುಂಠಿತ ಗೊಳಿಸದೆ ಸಾಗಿದೆ.                  
ಏನೋ ಕಲರವ ಕೇಳಿಸಿದಂತಾಗಿ ಜಾಲಂದ್ರದಿಂದ ಹೊರನೋಡಿದ ಕಾರ್ಯಕಾರ ಐಯಣ್ಣ, ಹೊರಕ್ಕೆ ಧಾವಿಸಿ ಬಂದ.ಬೇಹಿನ ಚಾವಡಿಯಿಂದ ಶಂಕರಪ್ಪನನ್ನು ಕೂಗಿ ಕರೆದ:    
  "ಯಾರೋ ಬರತಾ ಅದಾರೆ, ನೋಡೋ, ಅವರೇನೇನೋ ಸ್ವಾಮಿಗಳು?” 
  ನೋಡಿದ ಶಂಕರಪ್ಪ ಹೌದೆಂದು ತಲೆಯಾಡಿಸಿದ.       
  "ಕರಕೊಂಡಾ, ಮುಖಮಂಟಪದಾಗೆ ಕೂತಿರೋಕೆ ಹೇಳು. ನಾನು ಸನ್ನಿಧಾನಕ್ಕೆ  ಸುದ್ದಿ ಮುಟ್ಟಿಸತೀನಿ."
  ಶಂಕರಪ್ಪ ಮುಂದಕ್ಕೆ ಧಾವಿಸಿ ಅಪರಂಪಾರನ ಚರಣಗಳಿಗೆ ನಮಿಸಿದ.   
  "ನಾನು ಶಂಕರಪ್ಪ, ಅಯ್ಯನವರೆ."           
  ಅಪರಂಪಾರ ಕುಳಿತುಕೊಳ್ಳಲಿಲ್ಲ. ಮುಖಮಂಟಪದಲ್ಲಿ ನಿಂತು ನಾಲ್ಕೂ ಕಡೆಗೆ ನೋಡಿದ; ಅತ್ತಿತ್ರ ನಡೆದ.
  "ನಿಮ್ಮ ಮಹಾರಾಜರು ಇನ್ನೂ ಎದ್ದಿಲ್ಲವೇನು?"   
  "ಮಹಾಸ್ವಾಮಿಗಳು ಯಾವಾಗಲೂ ಒತಾರೆ ಲಗೂ ಏಳತಾರೆ, ಅಯ್ಯನವರೆ."
  "ಹಾಗೋ? ಆರೋಗ್ಯಕ್ಕೆ ಒಳ್ಳೆದು." 
  "ತಾವು ಬಂದೀರಿ ಅಂತ ಕಾರಕಾರ ಐಯಣ್ಣನವರು ಯೋಳ ಓಗವರೆ." 
  "ಸರಿ, ಎಷ್ಟು ಹೊತು ಸಾಧ್ಯವೋ ಅಷ್ಟು ಹೊತು ಕಾದಿರತೀವಿ."
  ವಿಳಂಬವಾಯಿತೆಂದರೆ ಅಯ್ಯ ಹೊರಟುಬಿಡಬಹುದು__ಎಂದು ಶಂಕರಪ್ಪನಿಗೆ ದಿಗಿ ಲಾಯಿತು.
  ಆದರೆ ತಡವಾಗಲಿಲ್ಲ, ಐಯಣ್ಣ ಕಾಣಿಸಿಕೊಂಡ.         
  ಕೈಜೋಡಿಸಿ ಆತ, "ಶರಣು!" ಎಂದನಾದರೂ ಕಣ್ಣಗಳು ಪರೀಕ್ಷಕ ನೋಟದಿಂದ ಅಪರಂಪಾರನನ್ನು ದಿಟ್ಟಿಸಿದುವು.
  ಅವನೆಂದ:                
  "ಚಿತ್ತೈಸಬೇಕು, ಮಹಾಸಾಮಿಗಳು ದಾರಿ ನೋಡತಾ ಅದಾರೆ."   
  ಅರಮನೆಯೊಳಗಿನ ದಾರಿಗಳು ತಿಳಿಯದೆ ಅಪರಂಪಾರನಿಗೆ? ಪೂರ್ವ ಜನ್ಮದಲ್ಲಿ ಹುಡುಗನಾಗಿದ್ದಾಗ ಹತಾರು ಸಾರೆಯಾದರೂ ಓಡಾಡಿರಲಿಲ್ಲವೆ ಅಲ್ಲಿ ಆತ?
  ಆದರೆ ಈಗ ಅವನು ಕಣ್ಣಿದ್ದೂ ಕುರುಡ. 
  ಮೊದಲು ಐಯಣ್ಣ, ಅವನನ್ನು ಹಿಂಬಾಲಿಸಿ ಅಪರಂಪಾರ, ಹಿಂದಿನಿಂದ ಶಂಕರಪ್ಪ ಅರಮನೆಯ ಒಳಭಾಗಕ್ಕೆ ನಡೆದರು.
  ಅಲ್ಲಿ ಚಿಕವೀರರಾಜೇಂದ್ರ ಗೊಂದಲದಲ್ಲಿ ಸಿಲುಕಿದ್ದ, ಈ ಜಂಗಮನನ್ನು ಹೇಗೆ ಬರ ಮಾಡಿಕೊಳ್ಳಬೇಕು ತಾನು ?
  ರಾಣಿ ಗೌರಮ್ಮ ಕೇಳಿದಳು:           
  "ಪಾದಪೂಜೆ ದಾಸೋಹಗಳಿಗೆ ಅಣಿಮಾಡಬೇಕು. ಅಲ್ಲವೇ?”    
  ಮಗಳು ಲಲ್ಲೆಗರೆದಳು:           
  "ಅಯ್ಯನವರನ್ನು ನಾನು ನೋಡಬಹುದಾ, ಅಪ್ಪಾಜಿ?"