ಪುಟ:ಸ್ವಾಮಿ ಅಪರಂಪಾರ.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ೮೬ ಸ್ವಾಮಿ ಅಪರ೦ಪಾರ

      “ಯಾರು ನೀವು ?"
      "ಒಬ್ಬ ಮನುಷ್ಯ."
     "ನಿಮ್ಮ ಮನೆಯೆಲ್ಲಿ?"
     "ಇಲ್ಲಾದರೆ ಇಲ್ಲಿ. ಇನ್ನೊಂದೆಡೆಯಾದೊಡೆ ಇನ್ನೊಂದೆಡೆ."
     "ನಿಮ್ಮ ತಾಯಿ ಯಾರು?"
     "ಗರ್ಭ.”
     “ತಂದೆ ? "
     "ಸರ್ವಸಂಗಪರಿತ್ಯಗಿಯಾದ ಜಂಗಮನ ಕರೆಸಿ ಇಂಥ ಪ್ರಶ್ನೆ ಕೇಳಬಾರದಪ್ಪ."
     "ಎಲ್ಲರ ಸಂಗವನ್ನೂ ನೀವು ಬಿಟ್ಟಿರುವುದು ನಿಜವೇ ? ಹಾಗೇಂತ ಲೋಕ ನಿಮ್ಮನ್ನು
 ಒಪ್ಪಿಕೊಂಡಿದೆಯಾ ?" -
   "ಸರ್ವಸಂಗಪರಿತ್ಯಾಗ ಮಾಡಿದ ಶಿವಶರಣನ ಲೋಕದ ಸಂಸಾರಿಗಳೆಂತು ಮೆಚ್ಚು

ವರಯ್ಯ? ಊರೊಳಗಿದ್ದರೆ ಉಪಾಧಿಕನೆ೦ಬರು. ಅಡವಿಯೊಳಗಿದ್ದರೆ ಮೃಗನೆಂಬರು. ಹೊನ್ನ ಬಿಟ್ಟರೆ ದರಿದ್ರನೆಂಬರು. ಹೆಣ್ಣ ಬಿಟ್ಟರೆ ನಪುಂಸಕನೆಂಬರು. ಪುಣ್ಯವ ಬಿಟ್ಟರೆ ಪೂರ್ವಕರ್ಮಿ ಎಂಬರು. ಮಾತನಾಡದಿದ್ದರೆ ಮೂಗನೆಂಬರು, ಮಾತನಾಡಿದರೆ,ಜ್ನಾನಿ ಗೇಕಯ್ಯ ಮಾತೆಂಬರು. ನಿಜವನ್ನಾಡಿದರೆ ನಿಷ್ಟೂರಿ ಎಂಬರು ,ಸಮತೆಯ ನುಡಿದರೆ ಅಂಜುವನೆಂಬರು, ಇದು ಕಾರಣ ಕೂಡಲ ಚೆನ್ನ ಸಂಗಯ್ಯ, ನಿಮ್ಮ ಶರಣ ಲೋಕದಿಚ್ಛಯ ನುಡಿಯ..."

    ಆರಸನ ಗಂಟಳಲೊಣಗಿತು. ಉಗುಳು ನುಂಗಿ ಆತನೆಂದ:
    "ಯಾರು ನಿಮ್ಮ ಗುರುಗಳು?" 
    'ಅನಾದಿಗಣನಾಥನ ಶಿಷ್ಯನು, ಆದಿಗಣನಾಥನು; ಆದಿಗಣನಾಥನ ಶಿಷ್ಯನು

ಅಧ್ಯಾತ್ಮ ಗಣನಾಥನು : ಆಧ್ಯಾತ್ಮ ಗಣನಾಥನ ಶಿಷ್ಯನು ವ್ಯೋಮಸಿದ್ದ ಗಣನಾಥನು : ವ್ಯೋಮಸಿದ್ದ ಗಣನಾಥನ ಶಿಷ್ಯನು ಬಸವನೆಂಬ ಗಣನಾಥನು : ಬಸವನೆಂಬ ಗಣನಾಥನ ಶಿಷ್ಯನು ಅಲ್ಲಮಪ್ರಭುವೆಂಬ ಗಣನಾಥನು : ಈ ಗಣಂಗಳೆಲ್ಲರ ಶಿಷ್ಯನು ಅಪರಂಪಾರನು --ಗುರುಲಿಂಗ ಜಂಗಮರ ಕಿ೦ಕರನು."

 "ಉಡುವುದಕ್ಕೆ ಉಣುವುದಕ್ಕೆ ನೀವೇನು ಮಾಡತೀರಿ ?"
  ಅಪರಂಪಾರ ಗಹಗಹಿಸಿ ನಕ್ಕನು. ಅವನ ಧ್ವನಿ ಏರಿತು.
  "ಬೆಟ್ಟಕ್ಕೆ ಛಳಿಯಾದೊಡೆ ಏನ ಹೊದ್ದಿ ಸುವರಯ್ಯ ? ಬಯಲು ಬತ್ತಲೆ ಇದ್ದರೆ ಏನ 

ನುಡಿಸುವರಯ್ಯ?...ಹಸಿವಾದೊಡೆ ಭಿಕ್ಷಾನ್ನಗಳುಂಟು, ತೃಷೆಯಾದೊಡೆ ಕೆರೆ ಹಳ್ಳ ಬಾವಿಗಳುಂಟು. ಚನ್ನಮಲ್ಲಿಕಾರ್ಜುನನುಂಟು ಆತ್ಮಸಂಗಾತಕ್ಕೆ...ತರಗೆಲೆಯ ಮೇಲಿದ್ದು ನಾವಿಹೆವು, ಸುರಿಗೆಯ ಮೇಲೊರಗಿ ನಾವಿಹೆವು, ಕಿಡಿಕಿಡಿ ಕೆದರಿದೊಡೆ ಎನಗೆ ಹಸಿವು ತೃಷೆ ಅಡಗಿತೆಂಬೆವು. ಮುಗಿಲು ಹರಿದು ಬಿದ್ದರೆ ಎನಗೆ ಮಜ್ಜನಕ್ಕೆರೆದರೆಂಬೆವು...ಗಿರಿ ಮೇಲೆ ಬಿದ್ದರೆ ಎಮಗೆ ಪುಷ್ಪವೆಂಬೆವು..."

  ಮುಂದೆ ಏನು ಕೇಳಬೇಕೆಂದು ತೋಚದೆ ಚಿಕವೀರರಾಜ ಮೌನವಾಗಿ ಕೆಲ ಕ್ಷಣ ನಿಂತ.
  ಅಪರಂಪಾರನೆಂದ:
  "ಪ್ರಶ್ನೆಗಳು ಮುಗಿದುವೆ, ಮಹಾರಾಜ?"