ಕೂಗಿದ. ಕಿಟ್ಟುವು ದೈನ್ಯದಿಂದ ಕುಳಿತ ಜಾಗ ಬಿಟ್ಟು ಏಳದೆ “ಓ ಓ” ಎಂದ, ನರಹರಿಯು “ಮೇಷ್ಟ್ರು ಕರೀತಾರೆ ಬಾರೊ" ಅಂದ. ಕಿಟ್ಟುವು ಆದರೂ ಅಲುಗಾಡಲೇ ಇಲ್ಲ. ಅವರ ತಂದೆಯವರು "ಹೋಗು ಮೇಷ್ಟು ಬಂದಿದ್ದಾರಂತೆ. ಅದೇನು ಕೇಳಿಬಿಟ್ಟು ಬಾ" ಎಂದರು. ಕಿಟ್ಟುವು ತಂದೆಯವರಿಗೆ ಹೂಜಿ ಕಾಣದಂತೆ ಏಳಬೇಕೆಂದು ಸವರಿಸುವುದರಲ್ಲಿ, ನೇರವಾಗಿ ಇಟ್ಟುಕೊಂಡಿದ್ದ ಹೂಜಿ ಸೊಟ್ಟಾಯಿತು. ಅದರಲ್ಲಿದ್ದ ನೀರು ಅವನ ತೊಡೆಯ ಮೇಲೆ ಬಿದ್ದು, ಅವನ ತಂದೆಯವರ ಬಳಿಗೆ ಹಾವಿನಂತೆ ಹರಿದುಕೊಂಡು ಹೋಯಿತು. ಅವರ ತಂದೆಯವರು ನೀರೆಲ್ಲಿಂದ ಬಂದಿತೆಂದುಕೊಂಡು ಆಶ್ಚರ್ಯದಿಂದ ಕಿಟ್ಟುವಿನ ಕಡೆ ನೋಡಿದರು. ಕಿಟ್ಟುವು ಪೆಚ್ಚಾಗಿ ಮೇಲಕ್ಕೆ ಎದ್ದನು. ಅವರ ತಂದೆಯವರು ಹೂಜಿಯನ್ನೂ, ಅದರಿಂದ ಹರಿದುಬರುತ್ತಿದ್ದ ನೀರನ್ನೂ, ನೋಡಿದರು. "ಪುನರಾಯಾನ್ ಮಹಾಕಪಿಃ, ಇದು ಇನ್ನೂ ಇಲ್ಲಿಯೇ ಇದೆಯೋ” ಎಂದು ಹೇಳಿ, ಕೈಯಲ್ಲಿದ್ದ ದೊಣ್ಣೆಯಿಂದ ಅದಕ್ಕೆ ಎತ್ತಿ ಒಂದು ಪಟ್ಟು ಹಾಕಿ ಚೂರು ಚೂರು ಮಾಡಿದರು. ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ.” ಸದ್ಯ ಅವರು ಕಿಟ್ಟುವಿನ ತಲೆಯನ್ನು, ಮೊದಲೇ ಹೇಳಿದ್ದಂತೆ ಒಡೆಯಲಿಲ್ಲ.
ಅವರು ಹೊರಟುಹೋದ ಮೇಲೆ ನರಹರಿಯ ಕೋಪ ಪೂರ್ಣವಾಗಿ ಶಮನವಾಯಿತು. ಕಿಟ್ಟುವು ಮಾಡಿದ ವಿನೋದದ ಸೇಡನ್ನು ತಾನು ಪೂರ್ತಾ ತೀರಿಸಿದಂತೆ ಆಯಿತು. ಆ ವಿಷಯ ಅಲ್ಲಿಗೆ ತೀರಿಹೋಯಿತು. ನರಹರಿಯು ಕಿಟ್ಟುವನ್ನು ಕುರಿತು ಒಂದು ಹೂಜಿ ತಂದುಕೊಡಲೇನೊ?” ಎಂದು ಕೇಳಿದ.
ಕಿಟ್ಟುವು "ಇಲ್ಲಿ ಸ್ವಲ್ಪ ತಿಂಡಿ ಇದೆ. ಮೊದಲು ತಿನ್ನೋಣ. ಆಮೇಲೆ ಹೋಗೋಣ" ಎಂಬುದಾಗಿ ಹೇಳಿ ಒಂದು ಗಂಟನ್ನು ಬಿಚ್ಚಿದ. ತಿಂಡಿ ಎಲ್ಲಿಂದ ಬಂದಿತೆಂದು ನರಹರಿಗೆ ಆಶ್ಚರವಾಯಿತು. ಗಂಟನ್ನು ಬಿಚ್ಚಿದ ಕೂಡಲೆ ತನ್ನ 'ಸಜ್ಜಪ್ಪ' ಮತ್ತು ಅರಳುಹಿಟ್ಟು ಅಚ್ಚಳಿಯದಂತೆ ಇದ್ದುದನ್ನು ಕಂಡು, ನರಹರಿಯು ನಗುವುದಕ್ಕೆ ಪ್ರಾರಂಭಿಸಿದ. ಕಿಟ್ಟುವೂ ಅವನ ಜೊತೆಯಲ್ಲಿ, ಕೊಠಡಿಯ ಸೂರು ಹಾರಿಹೋಗುವಹಾಗೆ ನಕ್ಕ.