ಪುಟ:ಹಳ್ಳಿಯ ಚಿತ್ರಗಳು.djvu/೧೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

x

ಜೋಡಿದಾರರಂತೂ ತಮ್ಮ ಜೋಡಿಯ ದೊಡ್ಡಸ್ತಿಕೆಯೊಂದಿಗೆ ಸಾಹಿತ್ಯದ ವ್ಯಕ್ತಿಗಳ ಪಙ್ಕ್ತಿಯಲ್ಲಿ ಮೇಲಣ ಒಂದು ಪೀಠವನ್ನು ಈಗ ಜಹಗೀರಿಯಾಗಿ ಸಂಪಾದಿಸಿದ್ದಾರೆಂದು ಹೇಳಬಹುದು. ಇಂಥ ಜಹಗೀರಿ ಬಹಳ ದೊಡ್ಡ ಗೌರವ; ಇದನ್ನು ಕೊಡುವ ಯೋಗ್ಯತೆ ಲೋಕದ ರಾಜರಿಗಿಲ್ಲ. ಹೀಗೆಯೇ ಭಾವನವರು, ಹನುಮ, ವಾಸ್ಕೋಡಿಗಾಮ; ಹೀಗೆಯೇ ಇನ್ನಿತರರು. ಇವರಲ್ಲಿ ಯಾರನ್ನೂ ಇನ್ನು ನಾವು ನಮ್ಮ ಜ್ಞಾಪಕದಿಂದ ಬಿಟ್ಟು ಕಳುಹಿಸುವುದಿಲ್ಲ.

ಪ್ರಕೃತಿಯ ಸೌಂದರವನ್ನು ಇವರು ಅಲ್ಲಲ್ಲಿ ಹೃದಯಂಗಮವಾಗಿ ವರ್ಣಿಸಿದ್ದಾರೆ. ಅಲ್ಲಿ ಭಾಷೆ ಆ ಕೆಲಸಕ್ಕೆ ತಕ್ಕದ್ದಾಗಿ ಸುಂದರವಾಗಿದೆ. ಈ ವರ್ಣನೆಗಳನ್ನು ಓದುವುದರಲ್ಲಿಯೂ ಪಾಠಕರು ಅತಿಶಯವಾದ ಆನಂದವನ್ನು ಅನುಭವಿಸುವರು.

ಬೇನೆಯ ಭಾವ ಒಂದೆರಡನ್ನು ಈ ಗ್ರಂಥದಲ್ಲಿ ಕಾಣಬಹುದು. ಹೃದಯದ ಮಂದರ ತಂತಿಗಳನ್ನು ಮಿಡಿಯುವುದರಲ್ಲಿಯೂ ಈ ಗ್ರಂಥಕರ್ತರಿಗೆ ಬಹಳ ಕೌಶಲ್ಯವಿದೆಯೆಂದು ಗ್ರಂಥದ ಆ ಭಾಗಗಳಿಂದ ವ್ಯಕ್ತವಾಗುತ್ತದೆ.

ಇನ್ನೂ ಹಲವು ಗುಣಗಳನ್ನು ಈ ಸಣ್ಣ ಗ್ರಂಥದಲ್ಲಿ ಕಾಣಬಹುದು. ನಮ್ಮ ಜನರು ಈ ಪುಸ್ತಕವನ್ನು ಓದಿ ಅದನ್ನೆಲ್ಲಾ ಕಾಣುವರೆಂದು ನನಗೆ ನಂಬಿಕೆಯುಂಟು. ಶ್ರೀಮಾನ್ ಐಯಂಗಾರರು ಇವುಗಳಂತೆ ಇನ್ನೂ ಅನೇಕ ಚಿತ್ರಗಳನ್ನು ಬರೆದಿದ್ದಾರೆ. ನಮ್ಮ ಜನರು ಈ ಗ್ರಂಥಕ್ಕೆ ತೋರಿಸುವ ಆದರಣೆಯಿಂದ, ಆ ಬೇರೆ ಚಿತ್ರಗಳನ್ನು ಅಚ್ಚು ಮಾಡಿಸುವುದಕ್ಕೆ ಆವಶ್ಯಕವಾದ ಉತ್ತೇಜನವು ಗ್ರಂಥಕರ್ತರಿಗೆ ದೊರೆಯಲೆಂದು ನಾನು ಹಾರೈಸುತ್ತೇನೆ.

ಬೆಂಗಳೂರು, ಪ್ರಜೋತ್ಪತ್ತಿ, ಸಂ॥
ಜ್ಯೇಷ್ಠ ಶುದ್ಧ ತೃತೀಯೆ.

ಶ್ರೀನಿವಾಸ