ಪುಟ:ಹಳ್ಳಿಯ ಚಿತ್ರಗಳು.djvu/೧೨೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಊರ ಬಸ್ಸು


ನಮ್ಮ ಊರಿನ ಬಸ್ಸಿನ ವಿಚಾರ ಕೇಳಿದರೆ ನಿಮಗೆ ನಕ್ಕು ಹೊಟ್ಟೆ ಹುಣ್ಣಾಗಿ ಬಿಡುತ್ತೆ. ಕುಲಮೂಲವನ್ನೂ ಋಷಿಮೂಲವನ್ನೂ ಕೇಳಕೂಡದಂತೆ, ಹಾಗೆಯೇ ನಮ್ಮ ಊರಿನ ಬಸ್ಸಿನ ಮೂಲವನ್ನೂ ನೀವು ಕೇಳಕೂಡದು. ಅದಕ್ಕೆ ಸಂಬಂಧಪಟ್ಟ ಒಂದೆರಡು ವಿಷಯಗಳನ್ನು ಮಾತ್ರ ನಿಮಗೆ ಹೇಳಿಬಿಡುತ್ತೇನೆ; ಅಷ್ಟೆ,

ಆ ದಿವಸ ಮಧ್ಯಾಹ್ನ ಗಂಟೆ ಸುಮಾರು ಹನ್ನೆರಡು ಇದ್ದಿರಬಹುದು. ಸೂರ್ಯನನ್ನು ಮೋಡಗಳು ಮುತ್ತಿಗೆ ಹಾಕಿಬಿಟ್ಟಿದ್ದುವು. ಮಿತಿಯಿಲ್ಲದೆ ನನ್ನ ಗದ್ದೆಯಮೇಲೆ ಹರಿಯುತ್ತಿದ್ದ ನಾಲೆಯ ನೀರಿನ ಪ್ರವಾಹವನ್ನು ಬೇರೆ ಕಡೆಗೆ ತಿರುಗಿಸಲು ಪ್ರಯತ್ನಿಸುತ್ತಾ, ಕೈಯಲ್ಲೊಂದು ಗುದ್ದಲಿಯನ್ನು ಹಿಡಿದುಕೊಂಡು ಗದ್ದೆಯ ಬದುವನ್ನು ಅಗೆಯುತ್ತಾ ನಿಂತಿದ್ದೆ. ಮಗ್ಗಲು ಗದ್ದೆಯಲ್ಲಿ ನಮ್ಮ ಆಳು ಬೋರನೂ ಅದೇ ಕೆಲಸವನ್ನು ಮಾಡುತ್ತಾ ನಿಂತಿದ್ದ. ಬೋರನಿಗೆ ವಯಸ್ಸು ೬೦. ನನಗೆ ೨೦. ಬೋರನು ಪದೇ ಪದೇ “ನೀವೆಲ್ಲಾ ಪುಳ್ಚಾರಿನ ಹಾರುವರು, ತುಪ್ಪ ಮೊಸರು ಕಾಫಿ ಕುಡಿಯೋದಕ್ಕೆ ಸರಿ. ನನ್ನ ಹಾಗೆ ಒಂದು ದಿವಸ ಈ ಗದ್ದೆಯ ಕೆಸರಿನಲ್ಲಿ ನಿಂತು ಕೆಲಸ ಮಾಡಿದರೆ ಆಮೇಲೆ ೧೫ ದಿವಸ ಬೇನೆಯಿಂದ ನರಳುತ್ತೀರಿ” ಎಂದ.

ನಾನು “ಆ ಕಾಲುವೆಯನ್ನು ನೀನು ತೆಗೆ; ನಾನು ಈ ಕಾಲುವೆಯನ್ನು ತೆಗೆಯುತ್ತೇನೆ. ಯಾರು ಮುಂಚೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಾರೋ ನೋಡೋಣ” ಎಂದೆ.

ಬೋರನು ಒಪ್ಪಿಕೊಂಡ. ಅವನು ಒಪ್ಪಿಕೊಳ್ಳದೆ ಇದ್ದಿದ್ದರೆ ಚೆನ್ನಾಗಿತ್ತು. ಹೆಮ್ಮೆ ಕೊಚ್ಚಿಕೊಂಡ ಮೇಲೆ ಕೆಲಸ ಮಾಡದಿದ್ದರೆ ವಿಧಿಯಿರಲಿಲ್ಲ. ಬೋರನು ಮುದಿ ಎತ್ತಿನಂತೆ ಒಂದೇ ಸಮನಾಗಿ ದುಡಿಯಲು