ಪುಟ:ಹಳ್ಳಿಯ ಚಿತ್ರಗಳು.djvu/೧೩೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೧೧೯
ನಮ್ಮ ಊರ ಬಸ್ಸು

ತೋರಿಸಿದ ಸ್ವಾರ್ಥತ್ಯಾಗವೇ ಮುಖ್ಯ ಕಾರಣ. ಅದು ಈ ರೀತಿ. ಒಂದು ದಿವಸ ಬಸ್ಸಿನಲ್ಲಿ ಹೋಗುತ್ತಿರುವಾಗ ದಾರಿಯಲ್ಲಿ ಅದಕ್ಕೆ ನೀರು ಬೇಕಾಯಿತು. ರಸ್ತೆಯ ಮಗ್ಗುಲಲ್ಲಿ ಒಂದು ಹಳ್ಳವಿದ್ದಿತು. ಅದರ ನೀರು ಕೆಂಪಾಗಿ ಕೊಚ್ಚೆಯಾಗಿತ್ತು. 'ಕ್ಲೀನರ್' ಮಹಾಶಯನು ಆ ನೀರನ್ನು ತಂದನು. ಆದರೆ ಡ್ರೈವರನು “ಬೇಡ, ಆ ನೀರು ಹಾಕಬೇಡ, ಸೋದಿಸಬೇಕು. ಅದರಲ್ಲಿರುವ ಕೆಸರೆಲ್ಲಾ ಒಳಕ್ಕೆ ಹೋದರೆ ಆಮೇಲೆ ದೇವರೇ ಗತಿ" ಎಂದನು. ಆದರೆ ಸೋದಿಸುವುದಕ್ಕೆ ಬಟ್ಟೆ ಎಲ್ಲಿದೆ? ಬಸ್ಸಿನಲ್ಲಿ ಕುಳಿತಿದ್ದ ಉಳಿದವರೆಲ್ಲಾ ಉದಾಸೀನದಿಂದಿದ್ದರು. ನನ್ನ ಸ್ನೇಹಿತ ಭಟ್ಟ ಮಾತ್ರ ಗಾಡಿಯಿಂದ ಇಳಿದು, ಬೆಳ್ಳಗೆ ಶುಭ್ರವಾಗಿ ಇಸ್ತ್ರಿ ಮಾಡಿ ಗರಿ ಗರಿಯಾಗಿದ್ದ ತನ್ನ ರುಮಾಲಿನ ಒಂದು ಸೆರಗನ್ನು ಬಸ್ಸಿನ ನೀರು ಕೊಳವೆಯ ಬಾಯಿಗೆ ಇಟ್ಟು “ಬಿಡಯ್ಯ ನೀರನ್ನು, ಸೋದಿಸಿಬಿಡೋಣ" ಎಂದ. ಸೋದಿಸಿದನಂತರ ಆ ರುಮಾಲಿನ ತುದಿಯನ್ನು ಅದೇ ನೀರಿನಲ್ಲಿ ಹಿಂಡಿ ತೊಳೆದ. ಆದರೆ ತೆಳುವಾದ ರುಮಾಲಾದುದರಿಂದ ಅದನ್ನು ಬಿಗಿಯಾಗಿ ಹಿಂಡಲು ಇಷ್ಟವಿಲ್ಲದೆ, ಏನೋ ಸುಮಾರಾಗಿ ಹಿಂಡಿ ಹೆಗಲಿನ ಮೇಲೆ ಹಾಕಿಕೊಂಡ. ಬಸ್ಸು ಹೊರಟಿತು. ಹಾಸನಕ್ಕೆ ತಲುಪಿದೆವು. ಆದರೆ ಬಸ್ಸಿನಿಂದ ಇಳಿದ ಕೂಡಲೆ ನಮ್ಮ ಭಟ್ಟನ ರೂಪು ವಿಚಿತ್ರವಾಗಿತ್ತು. ಚೆನ್ನಾಗಿ ಹಿಂಡದ ರುಮಾಲಿನಿಂದ ಕೆಂಪು ನೀರು ನಿಧಾನವಾಗಿ ಅವನ ಬಿಳಿಯ ಕೋಟಿನ ಮೇಲೂ ಪಂಚೆಯ ಮೇಲೂ ಸೋರಿದ್ದಿತು. ದೇವಸ್ಥಾನಗಳಿಗೂ ಮನೆಯ ಜಗುಲಿಗಳಿಗೂ ಸುಣ್ಣವನ್ನು ಹಚ್ಚಿ ಅದರ ಮೇಲೆ ಕೆಮ್ಮಣ್ಣಿನ ಪಟ್ಟಿಗಳನ್ನು ಬಳಿಯುವುದನ್ನು ನೀವು ನೋಡಿರಬಹುದು. ಎತ್ತುಗಳಿಗೆ ಕೆಂಪು ಬಿಳುಪಿನ ಗೌಸನ್ನು ಹಾಕುವುದನ್ನು ನೀವು ಕಂಡಿರಬಹುದು. ಭಟ್ಟನನ್ನು ನೋಡಿ ನನಗೆ ಅವುಗಳ ಜ್ಞಾಪಕಬಂದಿತು.

ಬಸ್ಸು ನಿಲ್ದಾಣದ ಹಿಂದುಗಡೆ ಒಂದು ದೊಡ್ಡ ತೋಟವಿದೆ. ಅದರಲ್ಲಿ ಒಂದು ತಿಳಿ ನೀರಿನ ಕೊಳವಿದೆ. ಭಟ್ಟನು ನನ್ನನ್ನು ನಿಲ್ದಾಣದ ಬಳಿ ಇರ ಹೇಳಿ, ತಾನು ಕೊಳದಲ್ಲಿ ಬಟ್ಟೆಯನ್ನು ಹಿಂಡಿ ಬಿಸಲಿನಲ್ಲಿ ಒಂದೇ ಘಳಿಗೆಯಲ್ಲಿ ಒಣಗಿಸಿಕೊಂಡು ಬರುವುದಾಗಿ ಹೇಳಿ ಹೊರಟುಹೋದನು. ನಾನು ಒಂದು ಪತ್ರಿಕೆಯನ್ನು ಓದುತ್ತಾ ಕುಳಿತುಕೊಂಡೆ. ಭಟ್ಟನ ರುಮಾಲಿನ