ವಿಷಯಕ್ಕೆ ಹೋಗು

ಪುಟ:ಹಳ್ಳಿಯ ಚಿತ್ರಗಳು.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೩೨
ಹಳ್ಳಿಯ ಚಿತ್ರಗಳು

ತ್ತಲೇ ಇದ್ದಿತು. ಒಂದು ದಿವಸ ಚಿಕ್ಕನ ಹೆಂಡತಿಯು ಮನೆಯ ಕಸವನ್ನು, ಕಾಳಮ್ಮನ ಮನೆಯ ಮುಂದೆ ಹಾಕಿಬಿಟ್ಟಳು. ಕಾಳಮ್ಮನು ಪದ್ಧತಿಯಂತೆ ಅವಳನ್ನು ಚೆನ್ನಾಗಿ ಬೈದಳು. ಚಿಕ್ಕನ ಹೆಂಡತಿಯೂ ಬೈದಳು. ಕಾಳಮ್ಮನು ಕೋಪದಿಂದ ಅವಳನ್ನು ಹಿಡಿದುಕೊಂಡು ಬೆನ್ನಿನಮೇಲೆ ನಾಲ್ಕು ಗುದ್ದು ಗುದ್ದಿದಳು. ಚಿಕ್ಕನು ಸಮೀಪದಲ್ಲಿದ್ದಿದ್ದರೆ ಬಂದು ಸಹಾಯಮಾಡುತ್ತಿದ್ದನೇನೊ? ಆದರೆ ಅವನು ಹೊಲದ ಕಡೆಗೆ ಹೋಗಿದ್ದುದರಿಂದ ಚಿಕ್ಕನ ಹೆಂಡತಿಯು ನಿರುಪಾಯಳಾಗಿ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು "ದಮ್ಮಯ್ಯ ಹೊಡೀಬೇಡ, ಇನ್ಮೇಲೆ ನಿನ್ನ ಬಾಗಲ್ಗೆ ಕಸಾ ಹಾಕೋದಿಲ್ಲ" ಎಂಬುದಾಗಿ ಬೇಡಿಕೊಂಡಳು.

ಇದು ನಡೆದ ಮೂರು ತಿಂಗಳ ನಂತರ ಚಿಕ್ಕನ ಹೆಂಡತಿಯು ಒಂದು ಹೆಣ್ಣು ಮಗುವನ್ನು ಪ್ರಸವಿಸಿದಳು. ಅದು ಕಪಿಯ ಮರಿಯಂತೆ ಕುರೂಪಿಯಾಗಿದ್ದಿತಲ್ಲದೆ ಅದರ ಒಂದು ಕಣ್ಣೂ ಸ್ವಲ್ಪ ಕುರುಡಾಗಿದ್ದಿತು. ಹೆಣ್ಣನ್ನು ನೋಡುವುದಕ್ಕೆ ಬಂದವರಲ್ಲಿ ಕೆಲವರು “ಹೆಗ್ಗಣದ ಮರಿಯಂತಿದೆ ಕೂಸು" ಎಂದರು. ಇನ್ನು ಕೆಲವರು ಇದು ಹುಟ್ಟದೆ ಹೋಗಿದ್ದರೆ ಏನು ಉಳಿದು, ಹೋಗುತ್ತಿತ್ತೋ" ಎಂದರು.

ಹರೆಯದ ಹುಡುಗಿಯರು ಕೆಲವರು "ಇಂತಹ ಮಗುವಿನ ತಾಯಿ.ಯಾಗುವುದಕ್ಕಿಂತ ಬಂಜೆಯಾಗಿರುವುದೇ ಲೇಸು” ಎಂದರು. ಮತ್ತೊಬ್ಬಳು "ಈಗಲೆ ಇದು ಸತ್ತಾದರೂ ಹೋಗಬಾರದೆ?” ಎಂದಳು.

ಅಷ್ಟುಹೊತ್ತಿಗೆ ಕಾಳಮ್ಮನು ಅಲ್ಲಿಗೆ ಬಂದಳು. ಅವಳ ಕೈಯಲ್ಲಿ ಒಂದು ಚಿಕ್ಕ ಗಂಟಿದ್ದಿತು. ಕಾಳಮ್ಮನು ಬಂದುದನ್ನು ಕಂಡು ಉಳಿದವರು ಗಾಬರಿಯಿಂದ ತಮ್ಮ ಮಾತುಗಳನ್ನು ನಿಲ್ಲಿಸಿದರು. ಕಾಳಮ್ಮನು ತಾನು ತಂದಿದ್ದ ಗಂಟನ್ನು ಬಿಚ್ಚಿದಳು. ಅದರಲ್ಲಿ ಒಂದು ತಿಂಗಳು ಮಗುವಿನ ಅಳತೆಯ ಎರಡು ಜರತಾರಿ ಅಂಗಿಗಳಿದ್ದವು. ಅದೇ ಅಳತೆಯ ಎರಡು ಚಿನ್ನದ ಕೈಬಳೆಗಳಿದ್ದುವು. ಎರಡು ಕಿವಿಯ ಕಡಕು, ಕಾಲುಬಳೆ, ಸರಪಣಿ ಇದ್ದುವು. ಕಾಳಮ್ಮನು ಅವುಗಳನ್ನೆಲ್ಲಾ ತೆಗೆದು ಚಿಕ್ಕನ ಹೆಂಡತಿಯ ಕೈಗೆ ಕೊಟ್ಟು ಮಗುವನ್ನು ಎತ್ತಿ ಮುದ್ದಾಡಿದಳು. ಅವಳ ಕಣ್ಣುಗಳಲ್ಲಿ