ಪುಟ:ಹಳ್ಳಿಯ ಚಿತ್ರಗಳು.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಾನು ರತ್ನಳ ಮದುವೆಗೆ ಹೋದುದು

೨೧

ದಂತೆಯೇ ಆಗುತ್ತಿದ್ದಿತು. ಮುಂದೆ ಅಪಾಯದ ಗಾಬರಿಯಿಂದ ನಾವು ಅರ್ಧ ಸತ್ತವರಾಗಿದ್ದೆವು. ನದಿಯ ನೀರು ಮಹಾಕಾಳಿಯು ಈಜುತ್ತಿದ್ದ ತಳವಿಲ್ಲದ ರಕ್ತದ ಸಮುದ್ರದಂತೆ ತೋರಿತು. ಅಲೆಗಳ ಕುಣಿತವು ಪ್ರಳಯ ಕಾಲದ ಈಶ್ವರನ ನಾಟ್ಯದಂತೆ ತೋರಿತು. ನಾವು ಕುಳಿತಿದ್ದ ಹರಿಗೋಲೇ ನಮ್ಮನ್ನು ಕೃತಾಂತನ ಊಳಿಗಕ್ಕೆ ಸಾಗಿಸುವ ವಾಹಕವಾಗಿತ್ತು. ಆದದ್ದಾಯಿತು. ದೇವರೇ ಗತಿ ಎಂದು ನಾವು ನಿರಾಶರಾಗಿ ಬಂದದ್ದನ್ನು ಅನುಭವಿಸಲು ಸಿದ್ದರಾದೆವು.

ಒಮ್ಮಿಂದೊಮ್ಮೆ ಅಂಬಿಗರು ಹೋ ಹೋ ಎಂದರು. ಅವರ ಮುಖದಲ್ಲಿ ಪೂರ್ಣವಾದ ನಿರಾಶೆಯ ಗಾಬರಿಯೂ ತೋರಿತು. ಎಲ್ಲರೂ ನದಿಯ ಮೇಲುಗಡೆಗೆ ನೋಡಲು ಪ್ರಾರಂಭಿಸಿದೆವು. ನಾವಲ್ಲಿ ಕಂಡುದು ನಮ್ಮ ದೇಹದ ರಕ್ತವನ್ನು ತಣ್ಣಗೆ ಮಾಡಿತು. ನಾಲಗೆಯು ಒಣಗಿಹೋಯಿತು. ಮುಖದ ಕಾಂತಿಯು ಹೀನವಾಯಿತು. ಯಮನು ಭಯಂಕರವಾದ ನೂರಾರು ಕೊಂಬೆಗಳ ಮರದ ರೂಪವನ್ನು ಧರಿಸಿ ನಮ್ಮ ಕಡೆಗೆ ಧಾವಿಸಿ ಬರುತ್ತಿದ್ದನು. ಆ ಮರವು ನದಿಯ ಒಂದು ದಡದಿಂದ ಮತ್ತೊಂದು ದಡದವರೆಗೆ ವ್ಯಾಪಿಸಿದ್ದಂತೆ ಕಂಡಿತು. ಅದಕ್ಕೇನಾದರೂ ಹರಿಗೋಲು ಸಿಕ್ಕಿಬಿಟ್ಟರೆ, ತಲೆಕೆಳಗಾಗಿ ನಾವೆಲ್ಲರೂ ನೀರಿನ ಪಾಲಾಗುವುದರಲ್ಲಿ ಸಂದೇಹವಿರಲಿಲ್ಲ. ಮರದಿಂದ ತಪ್ಪಿಸಿಕೊಂಡು ಹರಿಗೋಲನ್ನು ಬೇರೆ ಕಡೆಗೆ ತಿರುಗಿಸಬಹುದೆಂಬ ನಂಬಿಕೆಯು ಅಂಬಿಗರಲ್ಲಿ ಯಾರಿಗೂ ಇರಲಿಲ್ಲ. ಹರಿಗೋಲು ಅವರ ಸ್ವಾಧೀನ ತಪ್ಪಿಹೋಗಿದ್ದಿತು. ನಮ್ಮ ಪಾಪಕರ್ಮವೇ ಮೂರ್ತಿವೆತ್ತಂತೆ ಮರವು ಹರಿಗೋಲಿಗಿಂತಲೂ ಅಲ್ಲ ಮಿಂಚಿಗಿಂತಲೂ ವೇಗವಾಗಿ ಬರುತ್ತಿದ್ದಿತು. ನಾವೆಲ್ಲರೂ ಯಮನ ಲೋಕಕ್ಕೆ ಟಿಕೆಟ್ ಪಡೆದುಕೊಂಡು ಆಗಿದ್ದಿತು. ಟ್ರೇನು ಹತ್ತುವುದು ಮಾತ್ರಾ ಬಾಕಿ; ಟ್ರೇನೂ ಎದುರಿಗೇ ಬರುತ್ತಿದೆ ಎಂದುಕೊಂಡೆವು. ನಮ್ಮ ಮುದುಕರು, “ನೀರಿನಲ್ಲಿ ಸತ್ತವರಿಗೆ ಕರ್ಮಾಂತರವಿಲ್ಲ. ಮೋಕ್ಷವಿಲ್ಲ. ಅಂತರಪಿಶಾಚಿಯಾಗಿ ಅಲೆಯುತ್ತಿರಬೇಕು. ಮದುವೆಗೆ ಬಂದು ದುರ್ಮರಣವನ್ನು ಕಂಡಂತೆ ಆಯಿತು” ಎಂದು ನಿಟ್ಟುಸಿರುಬಿಟ್ಟರು.

ಅಂಬಿಗರಲ್ಲೊಬ್ಬನು “ಹುಟ್ಟಿ ಹಾಕಿ ನೋಡೋಣ, ಕಾವೇರಿ