ಪುಟ:ಹಳ್ಳಿಯ ಚಿತ್ರಗಳು.djvu/೪೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೩೩
ನಾವು ಮಾಡಿದ ಒಂದು ಯಾತ್ರೆ

ಒಂದೇ ಸಮನಾಗಿ ತೋರಿದರೂ ಬೇರೆ ಬೇರೆಯಾದ ಕಲೆಯ ಬೆಡಗನ್ನುಳ್ಳ ಚಿತ್ರದ ಕಂಬಗಳು, ಕಡೆದ ಕಂಬಗಳಂತೆ ಬಗೆ ಬಗೆಯ ದುಂಡುಗಳಿಂದಲೇ ಅವು ನಿರ್ಮಿತವಾಗಿವೆ; ಸುಂದರವಾದ ಕೆತ್ತನೆಯ ಕೆಲಸದ ನೃಸಿಂಹ ಸ್ತಂಭ; ಅದರಲ್ಲಿರುವ ತ್ರಿಮೂರ್ತಿಗಳ ನಾನಾ ಅವತಾರದ ಚಿತ್ರಗಳು. ಬಳಿಯಲ್ಲಿರುವ ಗರುಡ ವಿನತೆಯರ ಕಂಭ, ನವರಂಗದ ಹೊರಭಾಗದಲ್ಲಿ ಅಡಿಪಾಯದಿಂದ ೫ ಅಡಿಯವರೆಗೆ ಕೆತ್ತಿ ಮಾಡಿರುವ ಬಗೆ ಬಗೆಯ ವಿಗ್ರಹಗಳು. ಆನೆ, ಕುದುರೆ, ರಥ, ಲತೆ ಮತ್ತು ಮಣಿ ತೋರಣಗಳು; ಸುಂದರಿಯೊಬ್ಬಳು ಮನವೊಪ್ಪುವಂತೆ ಅಲಂಕಾರಮಾಡಿಕೊಂಡು ಬಳಿಯಲ್ಲಿರುವ ಕನ್ನಡಿಯಲ್ಲಿ ತನ್ನ ಮುಂಗುರುಳನ್ನೂ ಚೆಂದುಟಿಯನ್ನೂ ಹೊಳೆಯುವ ಕಣ್ಣುಗಳನ್ನೂ ನೋಡುತ್ತಿರುವಳು. ನರ್ತನದಲ್ಲಿ ಮನಸ್ಸು ಲೀನವಾದ ಬೇಡಿತಿಯ ಉಡುಪಿನ ಸೆರಗನ್ನು ಕಪಿಯೊಂದು ಹಿಡಿದು ಎಳೆಯುತ್ತಿರುವುದು. ಯೌವನ ಸ್ತ್ರೀಯೊಬ್ಬಳು ಚಿಗುರಿಗೆ ಸಮಾನವಾದ ತನ್ನ ಕರಗಳಲ್ಲಿ ತಾಂಬೂಲವನ್ನು ಹಿಡಿದು, ಮತ್ತೊಂದು ನಳಿತೋಳಿನ ಮೇಲೆ ಗಿಳಿಯನ್ನು ಕುಳ್ಳಿರಿಸಿಕೊಂಡು ಆಡಿಸುತ್ತಿರುವಳು. ಲಲನೆಯೊಬ್ಬಳು ತಾಳವನ್ನು ಹಾಕುತ್ತಿರುವಳು. ಚೆಲುವೆಯೊಬ್ಬಳು ಮೃದಂಗವನ್ನು ಬಾರಿಸುತ್ತಿರುವಳು. ಒಬ್ಬ ಲಲನಾಮಣಿಯು ಠೀವಿಯಿಂದ ಬಾಣವನ್ನು ಪ್ರಯೋಗಿಸುವ ಸಾಹಸದಲ್ಲಿ ತೊಡಗಿರುವಳು. ಕಲಾಕೋವಿದೆಯೊಬ್ಬಳು ವೇಣುವಾದನ ಮಾಡುತ್ತಿರುವಳು. ಒಬ್ಬ ಸರಸಿಯು ಪ್ರಿಯನಲ್ಲಿ ಪ್ರಣಯ ಕೋಪವನ್ನು ನಟಿಸುತ್ತಿರುವಳು.

ನಮಗಂತೂ ಆ ವನಿತೆಯರ ಗಾನವು ಕೇಳುತ್ತಿದೆಯೋ ಎಂದು ಭಾಸವಾಯಿತು. ಅವರೆದುರಿಗೆ ನಿಂತಾಗ ಅವರು ನಮ್ಮನ್ನು ನೋಡಿ ನಗುವಂತೆ ತೋರಿತು.

“ಶ್ರುತಗಾನದಭಿರಾಮಮಾದೊಡಮಶ್ರುತಗಾನಮಭಿರಾಮತರಂ” ಎಂಬುದು ನಮಗೆ ಅನುಭವವಾಯಿತು. ದೇವಸ್ಥಾನದ ಯಾವ ಭಾಗವೂ ಮನುಷ್ಯ ನಿರ್ಮಿತವಾಗಿದ್ದುದರಂತೆ ತೋರಲಿಲ್ಲ. ಅದು ದೇವಲೋಕದಲ್ಲಿ ರತಿಯ ಎದುರಿಗೆ ಅವಳ ಊಹೆಯಿಂದ ನಿರ್ಮಿತವಾಗಿ ಇಲ್ಲಿಗೆ ತರಲ್ಪಟ್ಟು ಇಡಲ್ಪಟ್ಟ ಕಲೆಯ ನೆಲೆಯಂತೆ ತೋರಿತು. ನಾನು