ಪುಟ:ಹಳ್ಳಿಯ ಚಿತ್ರಗಳು.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಜೋಡಿದಾರರ ಕೆಲವು ಚಿತ್ರಗಳು


೧. ಈಜು ಕಲಿತ ಇತಿಹಾಸ

ಆಗ ಅವರಿಗೆ ವಯಸ್ಸು ೧೫ ಇದ್ದಿರಬಹುದು. ಹೊಟ್ಟೆಯು ಈಗಿನಂತೆ ಮಿತಿಮೀರಿ ಬೆಳೆದಿರಲಿಲ್ಲ. ಹುಡುಗರಾಗಿ ಎಲ್ಲರಂತೆ ಚಟುವಟಿಕೆಯುಳ್ಳವರಾಗಿದ್ದರು. ತೆಂಗಿನ ಮರಗಳನ್ನೂ, ಅಡಕೆಯ ಮರಗಳನ್ನೂ ಲೀಲಾಜಾಲವಾಗಿ ಹತ್ತಿಬಿಡುತ್ತಿದ್ದರು. ಈಜುವುದರಲ್ಲಿಯ ನಿಸ್ಸಿಮರಾಗಿದ್ದರು. ಅವರು ಈಜು ಕಲಿತದ್ದೇ ಒಂದು ಇತಿಹಾಸ. ಆದರೆ ಅದನ್ನು ನಾಲ್ಕು ಪದಗಳಲ್ಲಿ ಹೇಳಿ ಮುಗಿಸಿಬಿಡುತ್ತೇನೆ. ಅವರ ತಂದೆಯವರು ಅವರು ನದಿಯಲ್ಲಿ ಹೋಗಿ ಈಜಲು ಅವಕಾಶವನ್ನು ಕೊಡುತ್ತಿರಲಿಲ್ಲ. ಏಕೆಂದರೆ ಈಜು ಬಂದವರೇ ನೀರಿನಲ್ಲಿ ಬೇಗ ಸಾಯುತ್ತಾರೆಂದು ಅವರು ತೀರ್ಮಾನಿಸಿದ್ದರು. ಅವರ ಸ್ನೇಹಿತನೊಬ್ಬನಿಗೆ ಚೆನ್ನಾಗಿ ಈಜು ಬರುತ್ತಿತ್ತಂತೆ. ನದಿಯಲ್ಲಿ ಒಂದು ಬಂಡೆಯ ಮೇಲೆ ನಿಂತುಕೊಂಡು ನೀರಿನೊಳಕ್ಕೆ ಲಾಗಾ ಹಾಕಿದನಂತೆ. ತಲೆಯು ಕಲ್ಲಿಗೆ ಬಡಿದು ರಕ್ತಪ್ರವಾಹವು ಹೊರಟು ನದಿಯ ನೀರೆಲ್ಲಾ ಕೆಂಪಾಗಿಬಿಟ್ಟಿತಂತೆ. ಮತ್ತೊಬ್ಬ ಸ್ನೇಹಿತನು ತುಂಬು ಹೊಳೆಯಲ್ಲಿ ನದಿಯನ್ನು ಒಂದು ದಡದಿಂದ ಮತ್ತೊಂದು ದಡಕ್ಕೆ ಈಜುವುದಕ್ಕೆ ಹೋಗಿ ತೇಲಿಯೇ ಹೋದನಂತೆ. ಆದುದರಿಂದ ಅವರು, ಮಗನು ನದಿಗೆ ಸ್ನಾನಕ್ಕೆ ಹೋದರೆ ನಿರ್ದಾಕ್ಷಿಣ್ಯವಾಗಿ ಕೈಕಾಲುಗಳನ್ನು ತುಂಡುಹಾಕಿಬಿಡುತ್ತೇನೆಂದು ಘರ್ಜಿಸುತ್ತಿದ್ದರು. ಆದರೆ ಅವರ ಮಗನಿಗೆ ಗೊತ್ತು, ತನ್ನ ಕೈಕಾಲು ತುಂಡುಬೀಳುವುದಿಲ್ಲವೆಂದು. ಆದರೆ ಬೆತ್ತದಿಂದ ನಿರ್ದಯವಾಗಿ ಏಟುಗಳು ಬೀಳುತ್ತವೆಂಬುದೂ ಅವನಿಗೆ ಗೊತ್ತು. ಆ ಏಟುಗಳನ್ನು ತಿಂದು ಅವನ ಮೈ ಜಡ್ಡುಗಟ್ಟಿ ಹೋಗಿತ್ತು. ಏನಾದರೂ ಆಗಲಿ ಈಜು ಕಲಿತೇಬಿಡುತ್ತೇನೆಂದು ಅವನು ನಿಶ್ಚಯಿಸಿದನು. ಇದಕ್ಕಾಗಿ ಸ್ಕೂಲು ಬಿಟ್ಟನಂತರ ಪ್ರತಿದಿನವೂ ಗುಟ್ಟಾಗಿ ಹೊಳೆಗೆ ಹೋಗುತ್ತಿದ್ದನು. ಅವರ ಮನೆಯಲ್ಲಿ ಅವರ ಭಾವನ ದೂರದ ಸಂಬಂಧದ ಯಾರೋ ಒಬ್ಬ ಮುದುಕಿಯಿದ್ದಳು. ಅವಳಿಗೆ ವಯಸ್ಸು ಸುಮಾರು ೬೦ ಇದ್ದಿರಬಹುದು.