ತೆಗೆದು ಬಿಚ್ಚಿದನು. ಎರಡು ಒಂಕಿಗಳು, ಒಂದು ಸರಿಗೆ ಇವುಗಳನ್ನು ಮುದ್ದೆ ಮಾಡಿ ಬಿಗಿದದ್ದಿತ್ತು; ಮೇಲೆ ಹತ್ತು ರೂಪಾಯಿಯ ೪-೬ ನೋಟುಗಳು, ಅವಳೂ ಸೆರಗಿನೊಳಗಿಂದ ಒಂದು ಮುತ್ತಿನ ಪುರಾತನ ಕಾಲದ ಮೂಗುತಿಯನ್ನು ತೆಗೆದಳು, "ಏನೊ ಪರಸಂಗ ಬಿದ್ರ ಇರ್ಲೆಂತ ನಾನೂ ತಂದೇನಿ ನೋಡು ನನ್ನೊಡ್ಯಾ. ಇವೊತ್ತು ನೀನು ಹ್ಯಾಂಗ ನನ್ನ ಮನೀಮಾರು ಬಿಡಿಸಿದಿ, ಅನ್ನ ಗಂಡನ್ನ ಬಿಡಿಸೀದಿ, ಊರ ಬಿಡಸಾಕ ನಿಂತೀದಿ, ಮತ್ತ ನಿನ್ನ ಬೆನ್ನಿಗೆ ಕಟಗೊಂಡ ಹೊಂಟೀದಿ, ಹಾಂಗ ಕಡಿತನಕಾನೂ ನಿನ್ನ ಬೆನ್ನಾಸರಾನು ನನಗಿರೂ ಹಾಂಗ ಮಾಡೋಕ, ಕಂಡ್ಯಾ ! ಇಲ್ಲಿದ್ರ, ನನ್ನ ಬಡಬಡದ ಕ್ಯಾರಾ ಹಣ್ಣಗಾಯಿ ನೀರಾಯಿ ಮಾಡಿ, ಸುಟ್ಟ ಸುಟ್ಟ ಸುಣ್ಣಾ ಮಾಡ್ತಾಳ........ ಆತೂ, ಆಂವಾ. ಅಂವದಾನಲ್ಲಾ-ನನ್ ಹ್ವಾದ ಜಲ್ಮದ ರಿಣಗೇಡಿ ವೈರೀ-ಗಂಡಾ ಅಂತನಿಸಿಗೊಳ್ಳಾಂವಾ-ಆಂವಾ ಮದವೀಗಂಡಾ ಅಂತ ಹಕ್ಕ ತೋರ್ಸಾಕ, ನನ್ನ ಹೊಡದಕ್ಯಾರಾ ಅರಜೀವಾ ಮಾಡಿ ಮಣ್ಣಾಗ ಮುಚ್ಚತಾನಆ ಕೊಲಿ-ಆ ಗೋಳು-ನಿನಗೇನ ಬ್ಯಾರೆ ಅರಿಯೇದ ಮಾತಲ್ಲ. ನಾನಗಂತೂ ಮೈಯುಂಡು ಹೋಗೇತಿ........ ” ಕಣ್ಣೀರು ಮಿಡಿಯಹತ್ತಿದಳು.
"ದುರ್ಪತೀ, ಇಕಾ- ಈ ನಮ್ಮಪ್ಪ ಹನುಮಪ್ಪನ ಮುಂದ ಕುಂತ ಕಿರೇವಮಾಡಿ ಹೇಳೇನಿ, ನನ್ನವ್ವನಕಾ ನಾನ್ನ ಮಾತ ಮೀರಿ ನಿನ್ನ ಹೊರದೂಡಾಕಿಲ್ಲಾ. ಒಂದ ವ್ಯಾಳೇಕ ಹೊರದೂಡಿದ್ರ-ನಾನೂ ಹೊರಬಿದ್ದು ನಿನ್ನ ಬೆನ್ನಿಗೆ ಹಚಗೊಂಡು ಭಿಕ್ಷಾ ಬೇಡೇನು-ಊರೂರ ಅಲ್ಲೇನು-ಉಪಾಸಿದ್ರೂ ನಿನ್ನ ಸಂಗಾಟನ ಸಂತೋಸದಿಂದಿದ್ದೇನು- ಆದ್ರ ಆದ್ರ-ನಿನ್ನ ಕೈ ಬಿಡಾಕಿಲ್ಲಾ ಅಂತ ತಿಳಿ ನೀನು........ ಜರ ಒಂದ ವ್ಯಾತ್ಮೀಕ ಹಂತಾ ಪರಸಂಗ ಬಂದು ನಾನೂ ನೀನೂ ಮನ್ಯಾಗ ರಾಗ ಕೇರ್ಯಾಗ ಬ್ಯಾಡಾದರ, ಈ ಲೋಕದಾಗ ಬ್ಯಾಡಾದ್ರ........ ನಿನ್ನ ಎದೀಗೆ ಕಟಗೊಂಡು ಭಾಂವೀ ಕೇರಿ