ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಕರುಳ ಕತ್ತರಿ
೭೫

ಸಾಹಸವಾಗಲಾರದು, ಅವನೇ ಆ ಪುಗಸೆಟ್ಟಿಯ ದುಷ್ಟ ನಾಯಕನು ಮಾಡಿರಬೇಕೆಂದು !!

ಅಂತೂ ಚಂದ್ರವ್ವನ ಮಟ್ಟಿಗೆ ಅವಳ ಗತಿಯೋಗ ಬೀದಿಯ ಭಿಕಾರಿಗಿಂತಲೂ, ಓಣಿಯ ಆಚೆಗಿನ ನಾಯಿಗಿಂತಲೂ ಕಡೆಯಾಗಿದೆ. ಊರೊಳಗಿನ ಹಲವು ಕರುಣಾಳುಗಳು ಅವಳನ್ನು ಆಗಲೇ ಹುಚ್ಚರ ಆಸ್ಪತ್ರೆಗೆ ಸಾಗಿಸಿದ್ದರು, ಏನೂ ಆಗಲಿಲ್ಲ....... 'ಧತ್ತೂರಿ ಬೀಜ'ದ ಮುಂದೆ, ಆಸ್ಪತ್ರೆಯ ಔಷಧಗಳೆಲ್ಲವೂ ತಲೆ ತಗ್ಗಿಸಿದವು. ಆಸ್ಪತ್ರೆಯವರೂ ನಿರುಪಾಯರಾಗಿ-ನಿರಾಶರಾಗಿ ಅವಳನ್ನು ಬಿಟ್ಟು ಬಿಟ್ಟರು.

ಅವಳ ಮಾರ್ಗವೇ ಈಗ ಬೇರೆ. ಎರಡು ಕತ್ತೆಗಳು ಹೊರಲಾರದಷ್ಟು ಭಾರವು ಅವಳ ತಲೆಯ ಮೇಲಿರುವದನ್ನು ನಾವು ಯಾವಾಗಲೂ ಕಾಣಬಹುದು. ಹಾಳುಮನೆಗಳ ಗೋಡೆಗಳಿಗೊರಗಿಕೊಂಡು ರಾತ್ರಿ ಕಾಲ ಕಳೆಯುವಳು. ಹಗಲು ಹೊತ್ತು ಯಾರಾದರೂ ಅಕ್ಕ ತಂಗಿಯರು ಎಂಬಲು-ಮುಸುರೆಗಳನ್ನು ಹಾಕಿದರೆ ತಿನ್ನುವಳು. ಇಲ್ಲವಾದರೆ ತನ್ನ ಗಂಟಿನೊಳಗಿನ ಹಲಪಿಯ ಹಣವನ್ನು ಎಣಿಸುತ್ತಲಾಗಲಿ, ಜನರು ಕೊಟ್ಟ ಹರಕು ಮುರಕು ಕೌದಿಯ ಇಲ್ಲವೆ ತಟ್ಟಿನ ತುಂಡುಗಳನ್ನು ಬರದ ಅರಿವೆಗಳೆಂದು ಮಡಿಕೆ ಹಾಕುತ್ತಲಾಗಲಿ, ಇಲ್ಲವೆ ಲಕ್ಷ್ಮೀರಮಣನ ಗುಡಿಯ ಮುಂದೆ ಸರಾಗವಾಗಿ ಹಾಡುತ್ತಲಾಗಲಿ ಕುಳಿತುಕೊಳ್ಳುವಳು. ತಿಪ್ಪೆಯಲ್ಲಿ ಕಸದ ಗುಂಡಿಗಳಲ್ಲಿ ಜನರು ಎಷ್ಟು ಒಡಕು ಗಡಿಗೆ ಮಡಿಕೆಗಳನ್ನು ಚಲುವರೋ, ಅಷ್ಟೆಲ್ಲವೂ ನಮ್ಮ ಚಂದ್ರವ್ವನ ಖಜಾನೆಯನ್ನು ಸೇರುವವು. ಅವಳೀಗ ಚಂದ್ರವ್ವನಲ್ಲ, "ಹುಚ್ಚ-ಚಂದ್ರಿ !!! ”