ಪುಟ:Abhaya.pdf/೧೫೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

"ನಂಗೆ ಹಿಂಸೆಯಾಗುತ್ತಮ್ಮ. ನಾನ ಅನುಭವಿಸಿದ್ದನ್ನೆ ನನ್ನಿಂದ ಯಾಕೆ ನೀವೆಲ್ಲ ಮುಚ್ಚುಮರೆ ಮಾಡ್ತೀರಾ?"

"ದೊಡ್ಡಮ್ಮ ಏನೂ ಹೇಳ್ಲಿಲ್ವೆ ಹಾಗಾದರೆ?"

"ಹೇಳಿದ್ರು-ನಿಂಗೆ ಭಾಗ್ಯವಿಲ್ಲ ತುಂಗಾ ಅಂತ. ನಾಲ್ಕು ದಿನ ಬಿಟ್ಟು, ನಾನು ಅಳ್ತಾ ಇದ್ದಿದ್ದನ್ನ ನೋಡಿ, ಮತ್ತೊಮ್ಮೆ ಅಂದ್ರು-ಹೆಣ್ಣು ಮಗು. ಮುದ್ಮುದ್ದಾಗಿತ್ತು. ದೇವರು ಕರಕೊಂಡಾ ಆಂತ...."

"ಹೌದಕ್ಕ..ಮುದ್ದುಮುದ್ದಾಗಿತ್ತು ನಮ್ಮಲ್ಲಿ ಮಗೂನ ನೋಡಿರೋರು ನಾವು ನಾಲ್ಕೇ ಜನ,-ದೊಡ್ಡಮ್ಮ, ಲಲಿತಾ, ಸಾವಿತ್ರ, ನಾನು. ಮುಖ್ಯ ಆ ಮಗೂನ ಆಡಿಸೋ ಭಾಗ್ಯ ನಂಗಿರಲಿಲ್ಲ. ಮಣ್ಣುಮಾಡೋಕೆ ನಾವು ಹೋದಾಗ ದೊಡ್ಡಮ್ನೇ ಎತ್ಕೊಂಡಿದ್ರು ಅದನ್ನ."

ಎಂತಹ ಕಟುಕಳು ಈ ಜಲಜ! ಹೃದಯಹೀನಳು! ತನ್ನ ಮಗುವನ್ನು ಕುರಿತು ಹಾಗೆಲ್ಲ ಅನ್ನುವುದೆ?

"ಸಾಕು! ಸಾಕು!"

ತುಂಗಮ್ಮನ ಗಟ್ಟಿಯಾದ ಆ ಸ್ವರ ಕೇಳಿ ಜಲಜೆಗೆ ದಿಗ್ಭ್ರಮೆಯಾಯಿತು. ಬಲವಾದ ತೆರೆಯಂತೆ ಆ ಮಾತು ಆಡಿದವಳ ಹ್ರದಯದ ದಂಡೆಗೇ ಅಪ್ಪಳಿಸಿ ಒಮ್ಮೆಲೆ ಚೂರಾಗಿ ತುಂತುರುಹನಿಯಾಗಿ ಕಣ್ಣೀರಾಗಿ ಹರಿಯಿತು.

"ಅಳಬೇಡ! ಅಕ್ಕಾ-ಅಳಬೇಡ...."

ಆದರೆ ಬೆಂದು ಬರಡಾಗಿದ್ದ ಹೃದಯ ಪ್ರದೇಶದಲ್ಲಿ ಆ ಹನಿಗಳೆಲ್ಲ ಇಂಗಿಹೋಗಲು ಬಹಳ ಹೊತ್ತು ಹಿಡಿಯಲಿಲ್ಲ.

ತುಂಗಮ್ಮನ ಅಳು ನಿಂತರೂ ಜಳಜ ಮುಖ ಬಾಡಿಸಿಯೇ ಕುಳಿತರು. ಸುಳ್ಳು ಹೇಳಿದ್ದಳಾಕೆ. ಸುಂದರವಾಗಿರಲಿಲ್ಲ ಆ ಮಗು. ಯಾವ ರೂಪವೂ ಇರಲಿಲ್ಲ ಆ ನಿರ್ಜೀವ ಮಾಂಸದ ಮುದ್ದೆಗೆ. ಆದರೆ, ಮುದ್ದು ಮುದ್ದಾಗಿತ್ತು ಎನ್ನದೆ ಬೇರೇನನ್ನಾದರೂ ಹೇಳುವುದು ಸಾದ್ಯವಿತ್ತೆ?

"ನಂಗೆ ಎಚ್ಚರವಾದಾಗ ಏನೂ ಎರ್ಲಿಲ್ಲ ಜಳಜ. ನೀವು ನಾಲ್ಕ್ಯೆದು ಜನ ಮತ್ತು ಆ ಡಾಕ್ಟ್ರು ನನ್ನ ಸುತ್ತೂ ನಿಂತಿದ್ರಿ ಅಷ್ಟೆ."

"ಹೌದು. ನಾವು ಮಾತ್ರ ಇದ್ವಿ...."

"ಮಗು?"