ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೮೮
ಚಿರಸ್ಮರಣೆ


ಇಲ್ಲವಪ್ಪ ಭಾರೀ ಅಡುಗೆ ಮಾಡಿಟ್ಟು ಅಮ್ಮ ಕಾದಿದ್ದಾಳೆ. ನಿಮಗೆ ನಾಳೆ ಸಿಗ್ತೇನೆ" ಎಂದು ಹೇಳಿ ಅಬೂಬಕರ್‌ ಎದ್ದೇಬಿಟ್ಟ.

ಆತನ ಜತೆಯಲ್ಲಿ ಚಿರುಕಂಡ ಹೊರಗೆ ಹತ್ತು `ಹೆಜ್ಜೆ ಹೋದ. ಮಾಸ್ತರ ವಿಷಯ ಕೇಳಬೇಕೆಂದು ಆತನ ಮನಸ್ಸು ತವಕಿಸಿತು. ಅಷ್ಟರಲ್ಲಿ ಅಬೂಬಕರನೇ ಅಂದ:

ಸದ್ಯಃ ತಲಚೇರಿಲಿದ್ದೇನೆ; ಇನ್ನೂ ಮಾಸ್ತರಿಕೆ ಕೆಲಸ ಹುಡುಕ್ತಾನೇ ಇದ್ದೇನೆ-- ಅಂತ ಮಾಸ್ತರು ನಿಮಗೆ ತಿಳಿಸ್ಬೇಕು ಅಂದಿದ್ದಾರೆ."

"ಅವರು ಆರೋಗ್ಯವಾಗಿದ್ದಾರಾ?"

ಮಾಸ್ತರ ವಿಷಯದಲ್ಲಿ ಅತ್ಮಂತ ಆತ್ಮೀಯತೆಯನ್ನು ಸೂಚಿಸಿದ ಆ ಧ್ವನಿ ಕೇಳಿ ಅಬೂಬಕರ್‌ ಚಕಿತನಾದ.

"ಹೂಂ. ಆರೋಗ್ಯವಾಗಿದ್ದಾರೆ. ನಾನು ಇಲ್ಲಿ ಹುಡುಗನಾಗಿದ್ದಾಗ ಅವರ ಪರಿಚಯ ಇಲ್ಲಿಲ್ಲ. ನನಗೆ ಅವರು ಮಾಸ್ತರಾದದ್ದು ತಲಚೇರಿಯಲ್ಲೇ!"

ಆದರೆ ಬೇರೇನನ್ನೋ ಯೋಚಿಸುತ್ತಿದ್ದ ಚಿರುಕಂಡ ಹೇಳಿದ:

“ಒಳ್ಳೇದಾಯ್ತು ಸಂಗಾತಿ! ನಾಳೆ ಬೆಳಿಗ್ಗೆ ಸಂಘದ ಕಚೇರಿಗೆ ಬನ್ನಿ. ಎಲ್ಲರ ಪರಿಚಯ ಮಾಡಿಕೊಡ್ತೇನೆ. ಜತೇಲಿ ಕೆಲಸ ಮಾಡೋಣ. ನಾವು ಮಾಡಬೇಕಾದ್ದು ಬೆಟ್ಟದಷ್ಟಿದೆ. ಕಾಗದದಲ್ಲಿ ಮಾಸ್ತರು ಸೂಚಿಸಿರೋದಂತೂ ಬಹಳ ವಿಶಿಷ್ಟವಾದದ್ದು. ವಿವರವಾಗಿ ನಾಳೆ ಮಾತಾಡೋಣ.

ಆ ನಾಳೆ, ಸಂಘ ಹೊಸ ಹೆಜ್ಜೆಗಳನ್ನಿಟ್ಟ ದಿನವಾಯಿತು. ತಲಚೇರಿಯಲ್ಲಿ ಬೀಡಿ ಕೆಲಸಗಾರನಾಗಿದ್ದ ಅಬೂಬಕರ್‌ ಕಯ್ಯೂರಲ್ಲೇ ನೆಲೆಸಲು ಬಂದಿದ್ದ. ಆತ ಶಹರದಲ್ಲಿ ಕಾರ್ಮಿಕರ ಒಂದು ಸ್ವಯಂಸೇವಕ ದಳಕ್ಕೆ ಉಪನಾಯಕನಾಗಿದ್ದ. ಅನುಭವಿ. ಕಯ್ಯೂರಿನ ಎಲ್ಲರ ದೃಷ್ಟಿಯಲ್ಲೂ ಅದು ಅವನಿಗೆ ದೊರತಿದ್ದ ವಿಶಿಷ್ಟ ಶಿಕ್ಷಣ. ಆ ಶಿಕ್ಷಣದ ಪ್ರಯೋಜನವನ್ನು ಸಂಘ ಪಡೆಯಿತು.

ಕ್ರಮಬದ್ದವಾದ ರೀತಿಯಲ್ಲಿ ಕಾರ್ಯೋನ್ಮುಖನಾಗಿ ಅಬೂಬಕರ್‌, ಕಯ್ಯೂರಿನ ರೈತ ಯುವಕರ ಸ್ವಯಂಸೇವಕ ದಳವನ್ನು ರಚಿಸಿದ.

ಸಂಘದ ಮುಂದೆ ಬೇರೆ ಹಲವು ಸಮಸ್ಕೆಗಳಿದ್ದುವು. ಕಯ್ಯೂರಿಗೆ ಗ್ರಾಮಪಂಚಾಯತಿ ಬೇಕೆಂದು ಅವರು ಜಿಲ್ಲಾಧಿಕಾರಿಗೆ ಅರ್ಜಿ ಬರೆದರು: ಉತ್ತರ ಬರಲಿಲ್ಲ. ಹೊಲವಿಲ್ಲದ ರೈತರಿಗಾಗಿ ಹಳ್ಳಿಯ ಒಂದು ಮೂಲೆಯಲ್ಲಿದ್ದ ಬಂಜರು. ಭೂಮಿಯನ್ನು ಕೃಷಿ ಮಾಡಲು ಅವಕಾಶ ಕೊಡಬೇಕೆಂದು ಸರಕಾರವನ್ನು ಕೇಳಿದರು.