ಪುಟ:Chirasmarane-Niranjana.pdf/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



೨೦

ಚಿರಸ್ಮರಣೆ

ಸುಖಾಸೀನರಾಗುತ್ತಿದ್ದಾರೆ. ಬೆಳಕು ಹರಿಯುವವರೆಗೂ ಇಲ್ಲಿಯೇ ಇರಲು ಇದು ಸಿದ್ಧತೆ. ನಿಮ್ಮ ನಾಡಿನಲ್ಲೂ ಬಯಲಾಟಗಳಿಗೆ ಜನ ಹೀಗೆಯೇ ಬರುತ್ತಾರೆ, ಅಲ್ಲವೆ?
....'ಕಾರ್ಯಕ್ರಮವೇನು?' ಎಂದಿರಾ? ಅದೋ, ವೇದಿಕೆಯ ಮೇಲಿನಿಂದ ಜಾಹೀರು ಮಾಡುತ್ತಿದ್ದಾರೆ. ಇನ್ನು ಸಮೂಹ ಭೋಜನಕ್ಕೆ ಆರಂಭ. ರಾತ್ರಿ ಒಂಭತ್ತರವರೆಗೂ. ಒಂದೊಂದು ಸಲ ಸಾವಿರ ಜನ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಿದ್ದೇವೆ. ಇದು ನಮ್ಮೂರಿನ ಆತಿಥ್ಯ. ಭೋಜನವಾದ ಮೇಲೆ ಈ ಉತ್ಸವದ ಹಿರಿತನ ವಹಿಸಲು ಬಂದಿರುವ ನಮ್ಮ ನಾಡಿನ ವೃದ್ಧ ನಾಯಕರ ಆರಂಭ ಭಾಷಣ. ಅದಾದಮೇಲೆ ಬೆಳಗು ಮುಂಜಾವದವರೆಗೂ ಹಾಡಿನ ಹಿನ್ನೆಲೆಯಲ್ಲಿ ನೃತ್ಯ, ನಾಟಕ ---'ಕಯ್ಯೂರು ವೀರಗಾಥಾ. 'ಆ ಬಳಿಕ ಸೂರ್ಯೋದಯಕ್ಕೆ ಸರಿಯಾಗಿ, ಕೊನೆಯದಾಗಿ...
ಆ ವಾಚನಾಲಯ, ಅಮೃತಶಿಲೆಯ ಸ್ತೂಪ, ಕಾಣಿಸುತ್ತಿವೆ ಅಲ್ಲವೆ?
'ಕಯ್ಯೂರು ವೀರಗಾಥಾ'ಮತ್ತೆ ಆ ನೆನಪು....
ಅದೋ, ಅಲ್ಲಿ ನೋಡಿ. ಸ್ವಯಂಸೇವಕರ ಪೋಷಾಕು ಧರಿಸಿ ನಿಂತಿರುವ ರೈತ ಯುವಕರಿಬ್ಬರನ್ನು ಕಂಡಿರಾ? ಅವರು ಮಠದ ಅಪ್ಪುವಿನ ತಮ್ಮಂದಿರು. ವೇದಿಕೆಯ ಮೇಲೆ ಬಲಭಾಗದಲ್ಲಿ ಕುಳಿತಿರುವ ವೃದ್ಧ ದಂಪತಿಗಳನ್ನು ನೋಡಿ. ಅವರು ಅಪ್ಪುವಿನ ತಾಯಿ ತಂದೆ, ಅವರ ಬಳಿಯಲ್ಲಿರುವ ಹೆಂಗಸೇ ಅಪ್ಪುವಿನ ಹೆಂಡತಿ. ಇನ್ನೂ ಎಳೆಯ ಮಗುವೇನೋ ಎಂಬಂತೆ, ತುಂಬು ಮುಖದ ತನ್ನ ಮಗನನ್ನು ಬಳಿಯಲ್ಲೇ ಕುಳ್ಳಿರಿಸಿಕೊಂಡಿದ್ದಾಳೆ ಆ ತಾಯಿ.
ಆ ಸಂಸಾರದ ಆಚೆಗಿರುವ ವೃದ್ದ ಮತ್ತು ವೃದ್ದೆ ಅವರೇ ಕೋಯಿತಟ್ಟಿನ ಚಿರುಕಂಡನ ತಾಯಿ ತಂದೆ. ಅವರ ಒಬ್ಬನೇ ಮಗ ಚಿರುಕಂಡ. ಬಳಿಯಲ್ಲಿ ಕುಳಿತಿರುವಾಕೆಯೇ ಆ ದಂಪತಿಯ ಸೊಸೆ.
ಮೂರನೆಯ ಕುಟುಂಬ ಸ್ವಲ್ಪ ದೊಡ್ಡದು. ವೇದಿಕೆಯ ಮೇಲೆ ಎಡಭಾಗದಲ್ಲಿರುವ ವಯಸ್ಸಾದ ಗಂಡಹೆಂಡತಿಯೇ ಪೊಡವರ ಕುಂಞಂಬುವನ್ನು ಹೆತ್ತವರು. ಕುಂಞಂಬು ಎಂದರೆ ನಿಮ್ಮ ಭಾಷೆಯಲ್ಲಿ ಪುಟ್ಟಣ್ಣ ಎಂದಹಾಗೆ. ಅವರಣ್ಣ ಕೇಳು ನಾಯರ್ ಕೆಳಗೆ ನಿಂತಿದ್ದಾನೆ. ತಮ್ಮ ರಾಯನ್ ನಾಯರ್. ಆ ಸೋದರರಲ್ಲಿ ಕೊನೆಯವನು ನಾರಾಯಣನ್ ನಾಯರ್. ಇವನೇ ನಮ್ಮೂರಿನ ಮೊದಲ ಪದವೀಧರ. ಮುಂದಿನ ಜೂನ್ ತಿಂಗಳಲ್ಲಿ ತಲಚೇರಿಯ ಕಾಲೇಜಿನಲ್ಲಿ ಆತ ಅಧ್ಯಾಪಕನಾಗುತ್ತಾನೆ. ನಾವು ಕೇರಳ ನಾಡಿಗೆ ಕೊಡುವ ಕಯ್ಯೂರಿನ ಪ್ರಥಮ