ಪುಟ:Chirasmarane-Niranjana.pdf/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೨೨೧

   "ನಿಮಗೆ ಗೊತ್ತೆ ? ಪ್ರಭು ಮತ್ತು ಧಾಂಡಿಗರನ್ನು ಮಡಿಕೈಯಲ್ಲಿ ಇವತ್ತು ಬೆಳಿಗ್ಗೆ ಹಿಡಿದ್ರು."
      "ಆಹ!"
      "ಕಯ್ಯೂರಿನ ವಿಷಯ ಈಗ ನಾನು ಹೇಳಿದ್ದೆಲ್ಲ ಅವರು ನಿನ್ನೆ ರಾತ್ರೆ ಕಳಿಸಿದ ವರದಿ.ನಿಮ್ಮನ್ನು ಕಾಣುವ ಉದ್ದೇಶದಿಂದಲೇ ಅವರು ಆಚೆಗೆ ಹೋದದ್ದು."
      ದುಃಖಕ್ಕೆ ಮಿತಿಯೇ ಇಲ್ಲವೇನೊ ಎಂದು ಅಪ್ಪು ಆಳವಾಗಿ ನಿಟ್ಟುಸಿರು ಬಿಟ್ಟ.ಅವರು ಮುಂದುವರಿಸಿದರು:
      "ಇಲ್ಲಿ ಸರಕಾರಿ ಠಾಣ್ಯದಿಂದ ಒಳಗಿನ ವರ್ತಮಾನ ನಮಗೆ ಬಂದಿದೆ. ಕಯ್ಯೂರು ಪ್ರಕರಣದ ಹೆಸರಲ್ಲಿ ಈ ಭಾಗದ ರೈತ ಚಳವಳಿಯ ಪ್ರಮುಖರನ್ನೆಲ್ಲ ಹಿಡೀಬೇಕೂಂತ ಸರಕಾರದ ಯೋಜನೆ. ಅವರು ಇಟ್ಟುಕೊಂಡಿರೋ ಗುರಿ ಆರವತ್ತೆರಡು. ರೈತರು, ಕಾರ್ಯಕರ್ತರು ಎಲ್ಲ ಸೇರಿ ಈಗಾಗ್ಲೇ ಐವತ್ತೆಂಟು ಜನರನ್ನು ಹಿಡಿದಿದ್ದಾರೆ.ನೀವಿಬ್ಬರೂ ಸೇರಿದರೆ ಆರುವತ್ತು. ಆದಾದ ಮೇಲೆ ಅವರಿಗೆ ಬೇಕಾಗಿರೋದು ಇಬ್ಬರು. ಆ ಇಬ್ಬರು ಯಾರೂಂತ ಅವರಿಗೇ ಸರಿಯಾಗಿ ಗೊತ್ತಿಲ್ಲ! ಹೆಸರು ನೋಡಿದರೆ ಎರಡೂ ಪಂಡಿತರು ಇಟ್ಟುಕೊಳ್ಳೋ ಬೇರೆ ಬೇರೆ ಹೆಸರುಗಳೇ..."
    ಅಪ್ಪು ಮತ್ತು ಅಬೂಬಕರ್ ಮೌನವಾಗಿದ್ದುದನ್ನು ಕಂಡು ಅವರೇ ಅಂದರು:
    "ಕಯ್ಯೂರಿನ ರೈತರ ಈಗಿನ ಕಷ್ಟಗಳಿಗೆಲ್ಲ ಅಪ್ಪು ಮತ್ತು ಅಬೂಬಕರ್ ಇಬ್ಬರೇ ಕಾರಣ ಅಂತ ಪ್ರಚಾರಮಾಡ್ತಿದ್ದಾರೆ. ನೀವಿಬ್ಬರು ಸಿಕ್ಕಿದ ತಕ್ಷಣ ದಳ ಅಲ್ಲಿಂದ ಹೊರಡ್ತದಂತೆ.ಹೊರಡ್ಬೇಕೂಂತ ಆಜ್ಞೆಯೂ ಇದೆಯಂತೆ."
    ಅಪ್ಪು ಹಿಂದಕ್ಕೆ ಬಾಗಿ ಗೋಡೆಗೆ ತಲೆಯಿಟ್ಟು ಕೇಳಿದ:
    "ಹಾಗಾದರೆ ಎಲ್ಲ ಮುಗೀತೂಂತ ಅರ್ಥವೇ?"
    "ಏನು ಹಾಗಂದರೆ? ಇದು ಶುರು-ಅಷ್ಟೆ. ಈ ಘರ್ಷಣೆಯಲ್ಲಿ ಉಕ್ಕಾಗೋ ರೈತರೇ ಇನ್ನೂ ದೊಡ್ಡ ಹೋರಾಟ ನಾಳೆ ಮಾಡ್ತಾರೆ."   
     "ಅದು ನಾಳೆಯ ಮಾತಾಯ್ತು. ಇವತ್ತು ಏನೂ ಇಲ್ಲವೆ?"
      ಸ್ವಲ್ಪ ಬೇಸರದ ಧ್ವನಿಯಲ್ಲಿ ಅವರೆಂದರು:
     "ನೀವು ಯಾಕೋ ಎಳೇಮಗುವಿನ ಹಾಗೆ ಮಾತಾಡ್ತಿದ್ದೀರಿ, ಸಂಗಾತಿ. ಜನತೆಯ ಹೋರಾಟ ಅಂದರೇ ಹೀಗೆ.ಸಾವಿರ ಕಡೆ ಚಕಮಕಿಯಾಗಿ ಕಿಡಿ ಹಬ್ಬಿದ ಮೇಲೆ ದೊಡ್ಡ ಬೆಂಕಿಯಾಗ್ತದೆ."
     "ಅದಕ್ಕಿಂತ ಮುಂಚೆ ಕಿಡಿ ಆರಿದರೆ?"