ಪುಟ:Chirasmarane-Niranjana.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ಬೆಳಿಗ್ಗೆ ಎದ್ದು ಆಟಕ್ಕೆ ಹೊರಟಿದ್ದೀರಿ ಅಲ್ಲ? ಎಳೇ ಮಕ್ಕಳ ಹಾಗೆಥೂ...!" ಹಾಗೆಂದು ತಾಯಿ ಪ್ರೀತಿಯಿಂದ ಗದರಿ ನುಡಿದಳು. ಹಿರಿಯರಿಗೆ ತಿಳಿಯದ ಕೆಲಸಕ್ಕೆ ಕೈಹಾಕಿದ್ದ ಎಳೆಯರು,ತಮ್ಮ ಹಿರಿತನದ ಬಗೆಗೆ ತಾವೇ ಅಭಿಮಾನಪಡುತ್ತ, ಪರಸ್ಪರ ನೋಡಿ ಮುಗುಳ್ನಕ್ಕರು. ಅದನ್ನು ಕಂಡ ತಾಯಿ ಸ್ವರವೇರಿಸಿ ಕೇಳಿದಳು; "ಏನ್ರೋ ಅದು?" "ಏನೂ ಇಲ್ಲವಮ್ಮ.ಇಲ್ಲೇ ಹೋಗಿಬರ್ತೇವೆ." –ತಾಯಿಗೆ ಯಾವ ಸಂದೇಹವೂ ಬರದ ಹಾಗೆ, ನಂಬಿಕೆಯ ಸ್ವರದಲ್ಲಿ ಅಪ್ಪು ನುಡಿದ. ತಾಯಿ, ಒಲೆಯ ಕೆಂಡಗಳೆಡೆಯಿಂದ ನೇಂದ್ರ ಬಾಳೆಯ ಎರಡು ಹಣ್ಣುಗಳನ್ನು ಹೊರಕ್ಕೆಳೆದಳು.ದಪ್ಪಗೆ ಉದ್ದವಾಗಿದ್ದ ಹಣ್ಣುಗಳು ಬೆಂದು ಕೆಂಪಗೆ ಬುಡಕಲಾಗಿದ್ದವು. ಚಿರುಕಂಡ ಅದನ್ನು ನೋಡಿದ. ಹುಡುಗರತ್ತ ದೃಷ್ಟಿ ಹಾಯಿಸುತ್ತ ತಾಯಿ ಹೇಳಿದಳು: "ಮುಖ ತೊಳ್ಕೊ ಅಪ್ಪು. ಹಣ್ಣು ತಿಂದ್ಕೊಂಡು ಹೋಗಿ. ಬರೀ ಹೊಟ್ಟೇಲಿ ಅಲೀಬೇಡಿ." ಅಪ್ಪು ಒಂದೇ ನೆಗೆತದಲ್ಲಿ ಹೊರಕ್ಕೆ ಧಾವಿಸಿದ.ಆವರಣವಿಲ್ಲದ ಪುಟ್ಟ ಬಾವಿಯಿಂದ ಮಣ್ಣಿನ ಗಡಿಗೆಯಲ್ಲಿ ಸೇದಿದ್ದ ನೀರು, ಬಾಳೆಯ ಗಿಡಗಳ ಬುಡದಲ್ಲಿ ಸಿದ್ಧವಾಗಿತ್ತು.ಅಪ್ಪು ಮುಖಮಾರ್ಜನದ ಶಾಸ್ತ್ರ ಮುಗಿಸಿದ. ತನಗೊಂದು ಮಗನಿಗೊಂದು ಎಂದು ಬೇಯಿಸಿದ್ದ ಹಣ್ಣುಗಳನ್ನು ಮಗನಿಗೂ ಮಗನ ಸ್ನೇಹಿತನಿಗೂ ತಾಯಿ ಕೊಟ್ಟಳು.ಹುಡುಗರು ಬಾಯಿ ಚಪ್ಪರಿಸುತ್ತ,ಸುಟ್ಟು ಹೋಗಿದ್ದ ಸಿಪ್ಪೆ ಸುಲಿದು, ಉಗಿಯೇಳುತ್ತಿದ್ದ ಬಿಸಿಯಾದ ರುಚಿಯಾದ ಹಣ್ಣನ್ನು ಸದ್ದು ಮಾಡುತ್ತ ತಿಂದರು. ಅಲ್ಲಿಂದ ಹೊರಟು ಆ ಗೆಳೆಯರಿಬ್ಬರು ಹೊಲದ ಏರಿಯ ಮೇಲೆ ನಡೆದು ಹೋದರು. ಎಲ್ಲವೂ ಸರಿಯಾಗಿಲ್ಲ ಎನ್ನುವಂತೆ ಚಿರುಕಂಡ ಹೇಳಿದ: "ಏನಪ್ಪ ನೀನು, ಬೆಳಿಗ್ಗೆ ಬೇಗ್ನ ಏಳ್ತೇನೆ ಅಂದೋನು?" "ನಾನೇನು ಮಾಡ್ಲೋ? ಅಪ್ಪ ಎದ್ದಾಗ ನನ್ನೂ ಎಬ್ಸೂಂತ ಅಮ್ಮನಿಗೆ ಹೇಳಿದ್ದೆ.ಅಮ್ಮ ಎಬ್ಬಿಸ್ಲೇ ಇಲ್ಲ."