ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೨೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೨೪೦
ಚಿರಸ್ಮರಣೆ

ಕೇಳಬಾರದು.ಕಾನೂನು ಪ್ರಕಾರ_"

ಜೇಲರಿಗೆ ಕಾನೂನು ಗೊತ್ತಿತ್ತು. ಜೋರಾದ ಕರಿ ಇರುವೆ ಬೆರಳಿಗೆ ಕುಟುಕಿದಂತಾಗಿ, ಅವರೆದ್ದು ಹೊರಹೋದರು.

"ಈ ಭೇಟಿಗೆ ಸಮಯ ನಿರ್ಬಂಧವಿಲ್ಲ, ನೀವು ಕೂತ್ಕೊಳ್ಳೋದೇ ವಾಸಿ" ಎಂದರು ರಾಜಾರಾಯರು.

ಚಿರುಕಂಡ, ಅಪ್ಪು ಮತ್ತು ಮಾಸ್ತರು ಗೋಡೆಗೊರಗೆ ಕುಳಿತರು. ಅವರ ಎದುರು. ಕುರ್ಚಿಯ ಮೇಲೆ ಕೂತುಕೊಂದು ವಕೀಲರು ಆ ಮೂವರು ಯಾರು ಯಾರೆಂದು ಕೇಳಿ ತಿಳಿದರು.

"ಮೊದಲು ಒಂದನೆಯ ಮತ್ತು ಎರಡನೆಯ ಆರೋಪಿಗಳಾಗಿ ಶೇಖರ ಉರುಫ಼್ ಪಂಡಿತ, ಮಾಧವನ್ ಉರುಫ಼್ ವರ್ಮ ಅಂತ ಹಾಕಿದ್ದರು.ಹಾಗೆ ಇಬ್ಬರಿಲ್ಲಾಂತ ನನಗೆ ತಿಳಿದಿದೆ. ಗುಟ್ಟು ಬಿಡಬಾರದು.ಮುಂದೆ ಮೊಕದ್ದಮೆಯಲ್ಲಿ ಅದನ್ನು ಉಪಯೋಗಿಸೋಣ. ಈಗ ಪಟ್ಟೀಲಿ, ಆ ಎರಡು ಹೆಸರುಗಳನ್ನು ಕೊನೇದಾಗಿ ಹಾಕಿದ್ದಾರೆ. ಮೊದಲ್ನೇ ಆರೋಪಿ ಅಪ್ಪು, ಎರಡನೆಯದಾಗಿ ಮಾಸ್ತರ್, ನಂಬರ್ ಮೂರು ಚಿರುಕಂಡ ನಾಲ್ಕು ಪ್ರಭು,ಐದು ಕೋರೆ ಆರು ಕಣ್ಣ, ಏಳು ಕುಟ್ಟಿಕ್ರಿಷ್ಣ, ಎಂಟು ಅಬೂಬಕರ್ ಹೀಗೆ...."

ವಕೀಲರ ಕೈಯಲ್ಲಿದ್ದ ಕಾಗದದಲ್ಲಿ ಆ ವಿವರವಿತ್ತು.

ಮಾಸ್ತರ ಪ್ರಶ್ನೆಗಳಿಗೆ ಉತ್ತರವಾಗಿ ಅವರೆಂದರು:

"ಈ ತಿಂಗಳ ಕೊನೇಲಿ ವಿಚಾರಣೆ ಶುರುವಾಗ್ಬಹುದು. ತಮ್ಮ ಕಡೆಯಿಂದ ಅವರು ಮೂವತ್ತು ನಾಲ್ವತ್ತು ಜನ ಸಾಕ್ಷಿಗಳ ಹೆಸರು ಕೊಟ್ಟಿದ್ದಾರೆ."

"ಅಷ್ಟು ಜನ! ಸಾಧ್ಯವೇ ಇಲ್ಲ. ನಮ್ಮ ವಿರುದ್ದ ಅಷ್ಟು ಜನ ಸಾಕ್ಷ್ಯ ಕೊಡಲಾರರು" ಎಂದ ಅಪ್ಪು.

ಮಾತಿನ ಆ ರೀತಿ ರಾಜಾರಾಯರಿಗೆ ಹಿಡಿಸಲಿಲ್ಲ. ಅವರು ಸ್ವರವೇರಿಸಿ ಅಂದರು:

"ಹುಂ! ನಿಮ್ಮ ಪರವಾಗಿ ಸಾಕ್ಷಿ ಹೇಳೋರು ಎಷ್ಟು ಜನ ಸಿಗಬಹುದು?"

"ಇಡೀ ಕಯ್ಯೂರೇ ನಮ್ಮ ಕಡೆ!"

ಅಪ್ಪುವನ್ನು ತಡೆದು ಮಾಸ್ತರೆಂದರು:

"ದಬ್ಬಾಳಿಕೆಯಿಂದಾಗಿ ಸಾಕ್ಷಿಗಳು ಸಿಗೋದು ಸ್ವಲ್ಪ ಕಷ್ಟವಾದೀತು." ವಕೀಲರು ತಾವು ಗೆದ್ದೆವೆಂದು ನಕ್ಕು ನುಡಿದರು:

"ಸ್ವಲ್ಪ ಎಂಥದು? ಪೂರಾ ಕಷ್ಟವೇ, ಆ ಊರಿನಲ್ಲಿ ಏನಾಗಿದೇಂತ ನಿಮಗೆ ಗೊತ್ತುಂಟೊ? ಸಾಕ್ಷಿ ತರಬೇಕಾದರೂ ನಾನೇ ಅಲ್ಲಿಗೆ ಹೋಗಬೇಕಾದೀತು."