ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಈ ನೆಲದಲ್ಲಿ ಕುರುಚಲು ಗಿಡಗಳಿವೆ, ಸದಾಹಸಿರಿನ ಸಸ್ಯಗಳಿವೆ. ಮುಖ್ಯವಾಗಿ ಕೃಷಿಗಾಗಿ ಕಾಡನ್ನು ಆಕ್ರಮಿಸಿದ ಮೇಲೆ ಕ್ರಮೇಣ ಪ್ರತಿಯೊಂದು ಸಸ್ಯವೈವಿಧ್ಯವೂ ಕಾಣೆಯಾಗುತ್ತ ಬಂದಿದೆ.

ಇವುಗಳಲ್ಲಿ ಕಾಸರಕನ ಗಿಡಗಳು, ನೆಲ್ಲಿಕಾಯಿ, ಕೇಪುಳ ಮತ್ತು ಕಾಡುಮರ ಇತ್ಯಾದಿಗಳು ಹುಲ್ಲುಗಾವಲ ಗಿಡಗಳೆನ್ನಬಹುದು. ಕು೦ಟಲ, ಮಾವು ಗಂಧದ ಮರ, ಗೇರು, ಕಾಡು ಗುಲಾಬಿ ಇವೆಲ್ಲ ಒಣ ಕುರುಚಲು ಸಸ್ಯಗಳಾಗಿ ಬೆಳೆಯುತ್ತವೆ.

ಇದರ ಜತೆ ಕಟ್ಟಿಗೆಯ ಗುಂಪಿನ ಮರಗಳಿವೆ. ರಂಜೆ, ಮರುವ, ತಿರ್ವ, ಬಿಳಿನಂದಿ, ಬಿಲ್ಮತ್ತಿ, ಬಿಲ್ವಾರ ಮೊದಲಾದುವು ಅ೦ತಹ ಮರಗಿಡಗಳು, ಇದರ ಜತೆ ತಕ್ಕಿಲೆ ಕೊಡಸಿಗೆ, ದಾಲಚೀನಿ, ಜಾಯಿಕಾಯಿ, ಹಾಗೆಯೆ ಕಿರಾಲುಬೋಗಿ ಮು೦ತಾದ ಮರಗಳು ಬೆಳೆಯುತ್ತವೆ.

ಘಟ್ಟದ ಇಳಿಜಾರು ಕಣಿವೆಗಳಲ್ಲಿ ಮಧ್ಯಮ ಮಟ್ಟದ ಸದಾ ಹಸಿರು ಕಾಡು ಕಂಡುಬರುತ್ತದೆ. ಸಸ್ಯಗಳು ದಟ್ಟವಾಗಿ ಬೆಳೆದ ಕಡೆ ಅಣಬೆಗಳು, ಆರ್ಕಿಡ್‌ಗಳು ಜರಿಗಿಡಗಳು, ಶ್ರೀಹೊನ್ನೆ, ಅಶೋಕ, ಕರಿದೂಪ, ದೇವದಾರು, ಕು೦ಟಲ, ಬಿದಿರು, ನಾರು ಬೇರು, ಬೀಳು ಬಳ್ಳಿ, ಒಳ್ಳೆಮೆಣಸು ಮು೦ತಾದ ಸದಾಹಸಿರಿನ ಸಸ್ಯಗಳು ಬೆಳೆಯುತ್ತವೆ.

ಪಶ್ಚಿಮ ಘಟ್ಟದ ಕಾಡುಗಳ ಕಿರಾಲುಬೋಗಿ, ಹಲಸು, ಹೆಬ್ಬಲಸು ಮರುವ, ಬೀಟಿಮರಗಳು ಪೀಠೋಪಕರಣ ಮತ್ತು ಕಟ್ಟಡ ನಿರ್ಮಾಣಗಳಲ್ಲಿ ಬಳಕೆಯಲ್ಲಿವೆ.

ದೂಪ, ಮಾವು, ಕಾಸರಕನ ಮರ, ಮರುವ, ಮೊದಲಾದ ಮರಗಳನ್ನು ನೇಗಿಲು ತಯಾರಿಸಲು ಮೊದಲು ಉಪಯೋಗಿಸುತ್ತಿದ್ದರು, ಈಗ ಕಬ್ಬಿಣದ ನೇಗಿಲುಗಳು ಬ೦ದಿವೆ. ಆದ್ದರಿ೦ದ ನೇಗಿಲುಗಳಿಗೆ ಮರದ ಅಗತ್ಯವಿಲ್ಲ.

ಹೊನ್ನೆಮರ, ಗುರಿಗೆ, ಅರಶಿನ ತೇಗ ಮೊದಲಾದುವನ್ನು ನೊಗಗಳ ತಯಾರಿಗಾಗಿ ಉಪಯೋಗಿಸುತ್ತಾರೆ, ಮಾವು ಧೂಪಗಳನ್ನು ದೋಣಿ ತಯಾರಿಸಲು ಉಪಯೋಗಿಸುತ್ತಾರೆ. ರೈಲ್ವೆ ಸ್ಲೀಪರ್‌ಗಳ ತಯಾರಿಯಲ್ಲಿ ರೆಂಜೆ, ಕಿರಾಲುಬೋಗಿ, ತಿರ್ವ ಹೊನ್ನೆ ಮತ್ತು ಮರುವ ಮೊದಲಾದ ಮರಗಳನ್ನು ಮೋಪುಗಳಾಗಿ ಬಳಸುತ್ತಾರೆ. ಬೆತ್ತಗಳಿಂದ ಪೀಠೋಪಕರಣಗಳನ್ನು ತಯಾರಿಸುತ್ತಾರೆ.

5