ಸಾಹಿತ್ಯ, ವಿಜ್ಞಾನ ಸಾಹಿತ್ಯ ಹಲವು ಕ್ಷೇತ್ರಗಳನ್ನು ವ್ಯಾಪಿಸಿ ನಿಂತ ಕಾರಂತರ ಪ್ರತಿಭೆ ವಿರಳವಾದ ರೀತಿಯದ್ದು. ಈ ಶತಮಾನದ ಎರಡನೆಯ ದಶಕದಿಂದ ಈ ವರೆಗೂ ಬರೆಯುತ್ತಿರುವ ಕಾರಂತರು, ಶಿಕ್ಷಣ ಸಮಾಜ ಸುಧಾರಣೆ, ಸ್ವಾತಂತ್ರ್ಯ ಹೋರಾಟ, ಸಾಮಾಜಿಕ ಸಂಘಟನೆ, ವೃತ್ತಿರಂಗ ಭೂಮಿ, ಸಾಹಿತ್ಯ-ಸಾಂಸ್ಕೃತಿಕ ಸಂಘಟನೆ, ಯಕ್ಷಗಾನ ಶಿಕ್ಷಣ ಮತ್ತು ಪ್ರಯೋಗ ಮುಂತಾದ ಕ್ಷೇತ್ರಗಳಲ್ಲಿ ದುಡಿದವರು. ಬರಹದೊಂದಿಗೆ ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ಈಗಲೂ ಸಕ್ರಿಯರು. ಕಾರಂತರದು ಪ್ರಚಂಡ ಪ್ರತಿಭೆ ಮತ್ತು ಸಾಧನೆ.
ಕನ್ನಡ ಕಾವ್ಯದಲ್ಲಿ ನವ್ಯಕಾವ್ಯವೆಂಬ ಹೊಸ ಮಾರ್ಗವನ್ನು ನಿರ್ಮಿಸಿ ಎಂ.ಗೋಪಾಲಕೃಷ್ಣ ಅಡಿಗರು, ಒಂದು ಸಾಹಿತ್ಯಕ ಯುಗದ ಆದ್ಯರು, ಪ್ರವರ್ತಕರು. ಆದ್ಯರೆಂಬುದರಿಂದ ಅಲ್ಲ, ಕಾವ್ಯ ಯೋಗ್ಯತೆಯಲ್ಲೂ ಅಡಿಗರದು ಉನ್ನತವಾದ ಪ್ರತಿಭೆ. ಈ ಶತಮಾನದುದ್ದಕ್ಕೂ ಸಾಹಿತ್ಯದ ಕ್ಷೇತ್ರದಲ್ಲಿ ವಿವಿಧ ರೀತಿಗಳಲ್ಲಿ ದುಡಿದ ಮಹನೀಯರ ಸಂಖ್ಯೆ ಬಲು ದೊಡ್ಡದು. ನಾಟಕಕಾರ ಗಿರೀಶ ಕಾರ್ನಾಡ್, ನಾಟಕ ನಿರ್ದೇಶಕ, ಸಂಗೀತಗಾರ ಬಿ.ವಿ. ಕಾರಂತರು ಕನ್ನಡ ರಂಗಭೂಮಿಗೆ ಹೊಸ ದಿಕ್ಕನ್ನು ನೀಡಿದವರು. ವೈವಿಧ್ಯಮಯ ಬರಹಗಳ ಅಮೃತ ಸೋಮೇಶ್ವರ, ಕವಿಗಳಾದ ಸುಬ್ರಾಯ ಚೊಕ್ಕಾಡಿ ಮತ್ತು ವೈದೇಹಿ, ಕಾದಂಬರಿಗಾರ್ತಿ ಸಾರಾ ಅಬುಬಕ್ಕರ್, ಕತೆಗಾರ ಬೋಳುವಾರು ಮಹ್ಮದ್ ಕುಂಞು ಹೀಗೆ ಸ್ವಾತಂತ್ರ್ಯೋತ್ತರ ಯುಗದ ಸಾಹಿತಿಗಳ ಯಾದಿಯಲ್ಲಿ ಗಣ್ಯರಾದವರ ಯಾದಿಯೇ ಬಹಳ ದೀರ್ಘವಿದೆ.
ಇದಲ್ಲದೆ ಕ್ರಿ.ಶ. ಸು. 1600ರ ಪಾರ್ತಿಸುಬ್ಬನಿಂದ ತೊಡಗಿ, ಇಂದಿನವರೆಗೂ ಯಕ್ಷಗಾನ ಪ್ರಸಂಗ ಸಾಹಿತ್ಯ ವಿಪುಲವಾಗಿ ಸೃಷ್ಟಿಯಾಗಿದೆ. ಸಂಶೋಧನ ರಂಗದಲ್ಲೂ ದೊಡ್ಡ ಸಾಧನೆಗಳಾಗಿವೆ. ಕನ್ನಡದ ಮೊದಲ ಪತ್ರಿಕೆಯಾದ 'ಮಂಗಳೂರು ಸಮಾಚಾರ'ದಿಂದ ಆರಂಭಿಸಿ, 'ಸುವಾಸಿನಿ' 'ಕೃಷ್ಣಸೂಕ್ತಿ'ಗಳ ಕಾಲದಿಂದ ಇಂದಿನ ಹತ್ತಾರು ಪತ್ರಿಕೆಗಳಿರುವ ಮಟ್ಟದವರೆಗೆ ಪತ್ರಿಕೋದ್ಯಮದಲ್ಲೂ ಈ ಜಿಲ್ಲೆ ಗಣನೀಯ ಸಾಧನೆ ಮಾಡಿದೆ.
50