ಪುಟ:Duurada Nakshhatra.pdf/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಅಲ್ಲ ಅಂದ್ಲು ನಮ್ಮಕ್ಕ, ನಿಮ್ಮನ್ನ ನೋಡಿದ್ರೆ ಬೆಂಗಳೂರ್ನೊರ ಹಾಗೆ ಕಾಣೋದಿಲ್ವಂತೆ, ಯಾವುದೋ ಹಳ್ಳಿಯವರಿರಬಹುದೂಂತ ನಮ್ಮಕ್ಕ ಅಂದ್ಲು,”

ತನ್ನ ಅಕ್ಕನ ಊಹೆ ಸರಿಯಾಗಲಿಲ್ಲವೆಂದು ನಾಗರಾಜನಿಗೆ ನಿರಾಸೆಯಾದರೆ, ಆ ಅಕ್ಕನ ಅಭಿಪ್ರಾಯ ಕೇಳಿ ಜಯದೇವನ ಮೈ ಉರಿಯಿತು. ಕಿವಿಗಳು ಕೆಂಪಗಾದುವು. ಸೂಚ್ಯ ಮಾತುಗಳಲ್ಲಿ ಆ ಶ್ಯಾಮಲಾ ತನ್ನನ್ನು ಅವಮಾನಿಸುತಿದ್ದಳೆಂದು, ಕೆಣಕುತಿದ್ದಳೆಂದು, ಅವನಿಗೆ ಹೊಳೆಯದೆ ಹೋಗಲಿಲ್ಲ.

“ನಿಮ್ಮಕ್ಕ ಹೇಳಿದ್ದು ಸರಿ ಕಣೋ. ನಾನು ಹುಟ್ಟಿದ್ದು ಕಾನಕಾನ ಹಳ್ಳೀಲಿ."

ಅಕ್ಕ ಸರಿಹೇಳಿದಳೆಂದು ನಾಗರಾಜನಿಗಾದ ಸಂತೋಷದ ಭರದಲ್ಲಿ ಜಯದೇವನ ಧ್ವನಿಯಲ್ಲಿದ್ದ ಸಿಡುಕು ಅವನ ಗಮನಕ್ಕೆ ಬರಲೇ ಇಲ್ಲ. ಅಕ್ಕನಿಗೆ ಆ ವಿಷಯ ತಿಳಿಸಲು ಆತ ಕೆಳಕ್ಕಿಳಿದು ಹೋದ.

ಒಮ್ಮೊಮ್ಮೆ ಕೊಠಡಿಯಿಂದ ಇಳಿದು ಬರತಿದ್ದಾಗ ಶಾಮಲೆಯ ದರ್ಶನವಾಗುತಿತ್ತು, ಆರಂಭದಲ್ಲಿ ಆಕೆ ಗಂಭೀರಳಾಗಿಯೇ ಇದ್ದಳು. ಬಳಿಕ ಯಾರೂ ಸವಿಯೊಪದಲ್ಲಿ ಇಲ್ಲದೆ ಇದ್ದಾಗ ಮುಗುಳ್ನಗತೊಡಗಿದಳು. ಈ ಸಂಕೋಚದ ಕಳ್ಳತನದ ನಗೆವಿನಿಮಯದಿಂದಲೆ ಹೆಚ್ಚುತಿತು. ಜಯದೇವನೊಳಗಿನ ಕಸಿವಿಸಿ. ನಮ್ಮವರೇ ಹೀಗೆ: ನೇರವಾಗಿ ಮಾತನಾಡಿ ನಿಸ್ಸಂಕೋಚವಾಗಿ ಬೆರೆತರೆ ಯಾವ ಯೋಚನೆಯೂ ಇಲ್ಲ; ಅದರ ಬದಲು ಬಾಗಿಲ ಮರೆಯಲ್ಲಿ ಬೇರೆಯವರ ಕಣ್ಣ ತಪ್ಪಿಸಿ–ಥೂ.... ಜಯದೇವ ಎಲ್ಲರನ್ನೂ ನಿಂದಿಸಿದ, ತನ್ನನ್ನೂ ನಿಂದಿಸಿಕೊಂಡ. ತಾನು ಎಚ್ಚರದಿಂದಿರಬೇಕು; ಉಪಾಧ್ಯಾಯನಾಗಿ ಇರಲು ಬಂದವನು ಮಾನವಾಗಿ ಮರ್ಯಾದೆಯಾಗಿ ಬಾಳಬೇಕು; ಯಾರಾದರೂ ಬೇಕುಬೇಕೆಂದೇ ಏನಾದರೂ ಅಪಾರ್ಥ ಕಲ್ಪಿಸಿದರೆ ಎಂತಹ ಪ್ರಮಾದವಾದೀತು! ... ಎಂದೆಲ್ಲ ಯೋಚಿಸಿದ.

ಆ ಸಂದರ್ಭಗಳಲ್ಲೆಲ್ಲ ಅನಿವಾರ್ಯವಾಗಿಯೆ ಅವನಿಗೆ ವೇಣು-ಸುನಂದೆ ಯರ ನೆನಪಾಗುತಿತ್ತು, ಅಂತಹ ದಿನಗಳಲ್ಲಿ ನೆಮ್ಮದಿ ಇಲ್ಲದ ಮನಸಿನಿಂದ ಆತ ಶಾಲೆಗೆ ಹೋಗುತಿದ್ದ.