ಪುಟ:Duurada Nakshhatra.pdf/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಲೆಗೆ ಹೋಗಲು ತಡವಾಗಿ ಹೋಗಿತ್ತು, ಅವಸರ ಅವಸರವಾಗಿ ಸ್ನಾನ ಮಾಡಿ ಬಟ್ಟೆಹಾಕಿಕೊಂಡು 'ಕೃಷ್ಣ ಪ್ರೇಮ'ದ ಸುರುಳಿಯನ್ನು ಕೈಲೆತ್ತಿಕೊಂಡು ಶಾಲೆಗೆ ವೇಗವೇಗವಾಗಿ ನಡೆದ. ಆಗಲೆ ಪಾಠಗಳು ಆರಂಭವಾಗಿದ್ದುವು. ತನ್ನ ಪಾಠವಿದ್ದ ಮೂರನೆಯ ತರಗತಿಗೆ ಏನೋ ಒಂದು ಲೆಕ್ಕ ಕೊಟ್ಟ ವೆಂಕಟರಾಯರು ತಮ್ಮ ತರಗತಿಗೆ ಹೋಗಿದ್ದರು. ಜಯದೇವ. ತರಗತಿಯನ್ನು ಹೊಕ್ಕರೂ ಹುಡುಗರ ಕ್ಷಮೆ ಕೇಳಿ, ಆ ಲೆಕ್ಕವಾಗುವವರೆಗೂ ಕಾದು ಕುಳಿತಿದು, ಆ ಬಳಿಕ ತನ್ನ ಪಾಠಮಾಡಿದ.

ಮಧ್ಯಾಹ್ನದ ವಿರಾಮದವರೆಗೂ ಸಿಡುಕಿನಲ್ಲೇ ಇದ್ದರು ವೆಂಕಟರಾಯರು, ಉಪಾಹಾರದ ಬಿಡುವಿನಲ್ಲಿ ಜಯದೇವ ಹೇಳಿದ:

“ಹುಡುಗೀರ್ಗೆ ಬೇಕಾದ ನಾಟಕ ಸಿಕ್ತು,”

"ಓ ! ಅದಕ್ಕೆ ತಡವಾಯ್ತೊ ? ನಿಮ್ಮನ್ನು ಹುಡುಕೋದಕ್ಕೆ ಜವಾನನ್ನ ಕಳಿಸೋಣಾಂತಿದ್ದೆ”

ಓದ್ತಾ ಇದ್ದವನಿಗೆ ಹೊತ್ತಾದ್ದು ಗೊತ್ತಾಗಲಿಲ್ಲ... ಇಲ್ಲೇ ಪ್ರಾಥಮಿಕ ಶಾಲೇಲಿ ತಿಮ್ಮಯ್ಯ ಅಂತ ಒಬ್ಬರು ಮೇಷ್ಟ್ರಿದಾರೆ.ಅವರು ಬರೆದು ಕೊಟ್ರು.”

“ಪರವಾಗಿಲ್ವೊ?”

“ಚೆನ್ನಾಗಿದೆ. 'ಕೃಷ್ಣ ಪ್ರೇಮ' ಅಂತ.”

“ಪ್ರೇಮ ಗೀಮ ಜಾಸ್ತಿ ಹಾಕ್ಬೇಡೀಪ್ಪ!”

“ಉಂಟೇ ಸಾರ್ ಎಲ್ಲಾದ್ರೂ!"

“ನಾಳೇನೆ ಪ್ರ್ಯಾಕ್ಟೀಸ್ ಇಟ್ಕೊಳ್ಳಿ, ನಾನೂ ಬರ್ತಿನಿ.”

ಸಂಜೆ ಜಯದೇವ ತಿಮ್ಮಯ್ಯನವರನ್ನು ಕರೆದುಕೊಂಡು ಆನಂದ ವಿಲಾಸಕ್ಕೆ ಹೋಗಿ ಭರ್ಜರಿಯಾಗಿ ತಿಂಡಿತಿನ್ನಿಸಿದ. ಆಮೇಲೆ ಇಬ್ಬರೂ ತಿಮ್ಮಯ್ಯನವರ ಹಳ್ಳಿಯತ್ತ ಸಾಗಿದ್ದ ಹಾದಿಯಲ್ಲಿ ಸಾವಕಾಶವಾಗಿ ನಡೆದು ಹೋದರು, ತಾವು 'ಕೃಷ್ಣಪ್ರೇಮ'ದಲ್ಲಿ ಸೇರಿಸಿದ್ದ ಒಂದೆರಡು ಹಾಡುಗಳನ್ನು ರಾಗವಾಗಿ ಅಂದು ತೋರಿಸಿದರು ತಿಮ್ಮಯ್ಯ,

ಜಯದೇವ ಮನಸಿನೊಳಗಿಂದ ಬಂದ ಒಂದು ಮಾತನ್ನು ಹೇಳಿದ:

“ನನಗೆ ಮುದ್ದಣನ ನೆನಪಾಗ್ತಿದೆ ತಿಮ್ಮಯ್ಯನವರೇ.”