ಪುಟ:Duurada Nakshhatra.pdf/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎಚ್ಚರಗೊಂಡು ಜಯದೇವ ಎದ್ದು ಕುಳಿತ. ಬಿಸಿಲಿನ ಶಾಖಕ್ಕೆ ಮೈಯೆಲ್ಲ ಬೆವತುಹೋಗಿತ್ತು ಕಣ್ಣುಗಳು ಉರಿಯುತಿದ್ದುವು. ಎಷ್ಟು ಹೊತ್ತಾಯಿತೋ ಏನೋ--ಎಂದುಕೊಂಡ ಜಯದೇವ.

ಹಾಗೆ ಮೂರು ನಾಲ್ಕು ನಿಮಿಷ ಕಳೆದಿದುವೋ ಇಲ್ಲವೋ ಮನೆಯೊಡತಿ ಒಳಬಾಗಿಲಿನಿಂದ ಹಚಾರಕ್ಕೆ ಇಣಿಕಿನೋಡಿ ಅಂದರು:

“ಎದ್ದಿರಾ ? ಘಂಟೆ ನಾಲ್ಕೂವರೆ ಆಗ್ತಾ ಬಂತು."

"ಅಷ್ಟಾಯ್ತೆ? ಚನ್ನಾಗಿ ನಿದ್ದೆ ಬಂದ್ಬಿಡ್ತು ನಂಗೆ."

ಆ ತಾಯಿಗೆ ಅದು ತಿಳಿಯದೆ? ತಮ್ಮ ಮಕ್ಕಳೇ ದೂರ ಪ್ರವಾಸದಿಂದ ಬಂದಾಗ ಈ ಲೋಕವನ್ನು ಮರೆತು ನಿದ್ದೆಹೋಗುವುದನ್ನು ಅವರು ಕಂಡಿರಲಿಲ್ಲವೆ?

ಮುಖಕ್ಕೆ ಒಂದಿಷ್ಟು ನೀರು ಹನಿಸಿಕೊಳ್ಳಲು ಬಯಸಿದ ಜಯದೇವ. ಆತನ ಮನಸ್ಸಿನಲ್ಲಿದುದನ್ನು ಸುಲಭವಾಗಿ ಊಹಿಸಿಕೊಂಡು ಸಾವಿತ್ರಮ್ಮ ಅ೦ದರು:

“ಏಳಿ, ಬಚ್ಚಲು ಮನೆಗೆ ಹೋಗಿ ಮುಖ ತೊಳಕೊಂಡು ಬನ್ನಿ. ಕಾಫಿ ಇಳಿಸಿದೀನಿ."

ಆ ಉಪಚಾರದ ಮಾತು ಕೇಳಿ ಜಯದೇವನಿಗೆ ಸಂಕೋಚವೆನಿಸಿತು. ಆದರೆ ಆ ತಾಯಿಯ ದೃಷ್ಟಿಯಿಂದ ಏನನ್ನು ಮರೆಮಾಚುವುದೂ ಸಾಧ್ಯವಿರಲಿಲ್ಲ ಆತನಿಗೆ--

“ಸಂಕೋಚಪಟ್ಕೋಬೇಡಿ. ಏಳಿ !"

ಜಯದೇವನೆದ್ದು ಮುಖ ತೊಳೆದುಕೊಂಡು ಬಂದ. ಟವಲಿನಿಂದ ನೀರೊರೆಸಿ, ಎರಡಾಣೆ ಕೊಟ್ಟಕೊಂಡಿದ್ದ ಪಾಸ್ಟಿಕ್ ಬಾಚಣಿಗೆಯನ್ನು ಬೆಳಗ್ಗೆ ತೊಟ್ಟಕೊಂಡಿದ್ದ ಮಲಿನವಾದ ಜುಬ್ಬದ ಜೇಬಿನಿಂದ ಹೊರತೆಗೆದ. ಅವನ ಕಣ್ಣಿಗೆ ಎಲ್ಲೂ ಕನ್ನಡಿ ಬೀಳಲಿಲ್ಲ, ಅದರ ಅವಶ್ಯಕತೆಯೂ ಇರಲಿಲ್ಲ ಅವನಿಗೆ ಬಾಚಣಿಗೆ ನೀಳವಾದ ತಲೆಗೂದಲನ್ನು ನುಣುಪಾಗಿ ಬಾಚಿ ಹಿಂದಕ್ಕೆ ತಳ್ಳಿತು. ಅಷ್ಟರಲ್ಲೆ ಸಾವಿತ್ರಮ್ಮ ಕನ್ನಡಿ ತಂದು ಹೊರಕ್ಕಿಟ್ಟರು.