ಪುಟ:Duurada Nakshhatra.pdf/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಶ್ನೆಯಿಂದ ಕದಡಿದ್ದ ವಾತಾವರಣವನ್ನು ಮಧುರಗೊಳಿಸಲೆಂದು ಮಾತು ತಿರುಗಿಸಿದರು:

“ನೀವೇ ಭಾಗ್ಯವಂತರು ಜಯದೇವ್. ನಾನಂತೂ ಹಣ್ಣೆಲೆ.ನಂಜುಂಡಯ್ಯನೂ ಹಲವು ವರ್ಷಗಳ ಅನುಭವಿಕರು. ಯುವಕರು ನೀವೊಬ್ಬರೇ ಹೆಚ್ಚು ವರ್ಷಕಾಲ ಉಪಾಧ್ಯಾಯರಾಗಿರೋ ಭಾಗ್ಯ ಈಗಿರೋದು ನಿಮಗೆ!"

ಜಯದೇವನಿಗೆ ನಗು ಬಂತು.

“ಹಣ್ಣೆಲೆಯನ್ನು ನೋಡಿ ಚಿಗುರೆಲೆ ನಗುತ್ತದಂತೆ”

ನಂಜುಂಡಯ್ಯ ಬಲು ಬುದ್ಧಿವಂತಿಕೆಯ ಒಂದು ಮಾತನ್ನು ತಾವು ಹೇಳುತಿದ್ದೇವೆಂದು ಭಾವಿಸುತ್ತ, ಅಂದರು. ಆಗಿನ ಸನ್ನಿವೇಶಕ್ಕೆ ಆ ಮಾತು ತಕ್ಕುದಾಗಲಿಲ್ಲವೆಂಬ ಅಂಶ ಅವರಿಗೆ ಹೊಳೆಯಲಿಲ್ಲ.

“ಆದರೆ ಗಿಡ-ಬಳ್ಳಿಗೆ ಹಣ್ಣು, ಕಾಯಿ ಎಲ್ಲವೂ ಭೂಷಣ ಅಲ್ವೆ?”

ಜಯದೇವನ ಆ ಮಾತಿನಲ್ಲಿ ವಿಶೇಷವಾದ ಬುದ್ಧಿವಂತಿಕೆಯೇನೂ ಇರಲಿಲ್ಲ. ಆದರೂ ರಂಗರಾಯರಿಗೆ ಆ ಮಾತು ಪ್ರೌಢವಾಗಿ ತೋರಿತು.

... ಕತ್ತಲಾಗುತಿದ್ದಂತೆ ಆ ಮೂವರೂ ಮತ್ತೆ ಶಾಲೆಯನ್ನು ದಾಟಿ ರಂಗರಾಯರ ಮನೆಯನ್ನು ಸಮೀಪಿಸಿದರು.

"ಜಾತಿಯಲ್ಲಿ ನಂಬಿಕೆ ಇಲ್ಲಾ ಅಂದ್ರಿ. ಹಾಗಾದರೆ ಎಲ್ಲಿ ಬೇಕಾದರೂ ಊಟ ಮಾಡೋಕೆ ಸಿದ್ಧತಾನೆ?""

ನಂಜುಂಡಯ್ಯ ನಗುತ್ತ ಆ ಪ್ರಶ್ನೆ ಕೇಳಿದ್ದರೂ ಅದಕ್ಕೆ ನೇರವಾದ ಉತ್ತರದ ಅವಶ್ಯಕತೆಯಿತ್ತು.

“ಓಹೋ ! ಧಾರಾಳವಾಗಿ!”

“ಹಾಗಾದರೆ ನಾಳೆ ನಮ್ಮಲ್ಲಿಗೆ ಊಟಕ್ಬನ್ನಿ ಇವತ್ತಂತೂ ಹೆಡ್ಮೇಷ್ಟ್ರೇ ನಿಮ್ಮನ್ನು ಉಳಿಸ್ಕೊಂಡ್ಬಿಟ್ಟಿದಾರೆ... ಬರ್ತೀರಾ?”

“ಖಂಡಿತ ಬರ್ತೀನಿ."

ಥಟಕ್ಕನೆ ಬಂದ ಆ ಉತ್ತರದಿಂದ ನಂಜುಂಡಯ್ಯ ಚಕಿತರಾದರು. ರಂಗರಾಯರಿಗೂ 'ಈ ಜಯದೇವ ಆಳವಾದ ವ್ಯಕ್ತಿ' ಎನಿಸಿತು. ಇದು ತನ್ನ ವಿಜಯ ಎನ್ನುವಂತೆ ನಂಜುಂಡಯ್ಯ ಮುಖ್ಯೋಪಾಧ್ಯಾಯರ ಮುಖನೋಡಿದರು.