ಪುಟ:Duurada Nakshhatra.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಪುಸ್ತಕ ಕೊಂಡುಕೊಳ್ಳೋದು ನನ್ನದೊಂದು ಚಟ.. ಇಂಥದೇ ಅಂತ ಇಲ್ಲ, ಮೈಸೂರಿಗೋ ಬೆಂಗಳೂರಿಗೋ ಹೋದಾಗಲೆಲ್ಲ ನೂರುನೂರು ರೂಪಾಯಿ ಪುಸ್ತಕ ತಂದು ಹಾಕ್ತಿನಿ.”

ಒಂದೊಂದು ಸಾರೆಯೂ ನೂರು-ನೂರು ರೂಪಾಯಿ ಬೆಲೆಯ ಪುಸ್ತಕ! ಬಡ ಮಾಧ್ಯಮಿಕ ಶಾಲೆಯ ಉಪಾಧ್ಯಾಯರು ಅಷ್ಟು ಖರ್ಚುಮಾಡುವುದು ಎಂದಾದರೂ ಸಾಧ್ಯವೆ? ಉಪಾಧಾಯ ವೃತ್ತಿ ಅವರ ಸಂಪಾದನೆಯ ಸಾಧನವಾಗಿರಲಿಲ್ಲವೋ ಏನೋ ? ಅಷ್ಟು ದೊಡ್ಡ ಮನೆ-ಅವರು ಶ್ರೀಮಂತರೇ ಇರಬೇಕು.

ಆ ಪುಸ್ತಕಗಳು... ಕೈ ಬೆರಳು ಅವುಗಳನ್ನು ಹೆಚ್ಚಾಗಿ ತಡವಿದಂತೆಯೇ ತೋರಲಿಲ್ಲ.

"ಇಂಗ್ಲಿಷ್ ಪುಸ್ತಕಗಳೇ ಜಾಸ್ತಿ, ಅಲ್ವೆ?"

“ಹೌದು, ಹೌದು. ಕನ್ನಡದಲ್ಲಿ ಏನಿದೇಂತ ಕೊಂಡ್ಕೋಬೇಕು?"

ಕನ್ನಡವನ್ನು ಕುರಿತಾದ ಆ ಟೀಕೆ ಜಯದೇವನಿಗೆ ಹಿಡಿಸಲಿಲ್ಲ, ಅದು ನಿಜವಾಗಿರಲಿಲ್ಲ, ಅದರ ವಿಷಯಪಾಗಿ ದೀರ್ಘ ಚರ್ಚೆ ನಡೆಸುವುದಕ್ಕೂ ಅವನು ಸಿದ್ಧವಾಗಿದ್ದ. ಆದರೆ ಮನೆಗೆ ಊಟಕ್ಕೆ ಕರೆದಾಗ ಹಾಗೆಲ್ಲ ಮಾತನಾಡದಿರುವುದೇ ಮೇಲೆನಿಸಿತು.

ಹೀಗಿದ್ದರೂ ತಡೆಯಲಾಗದೆ ಹೃದಯದೊಳಗಿನ ನೋವು, ನಾಲಿಗೆಯ ತುದಿ ಚಲಿಸುವಂತೆ ಮಾಡಿತು.

“ಕನ್ನಡದಲ್ಲೇನೂ ಇಲ್ಲ ಅಂತೀರಾ?” -

ಸೂಕ್ಷ್ಮಗ್ರಾಹಿಯಾದ ನಂಜುಂಡಯ್ಯ, ಜಯದೇವನ ಮನಸ್ಸಿನಲ್ಲಿದುದನ್ನು ಊಹಿಸಿಕೊಂಡರು. ಜಯದೇವನ ಆತ್ಮೀಯನಾಗಲೆತ್ನಿಸುತ್ತಿದ್ದ ಅವರೂ ಆ ದಿನ ವೃಥಾವಾದಕ್ಕೆ ಸಿದ್ಧರಿರಲಿಲ್ಲ.,

“ಹಾಗಲ್ಲ, ಇಂಗ್ಲಿಷಿನಲ್ಲಿರೋ ರೀತಿ ಪುಸ್ತಕಗಳು ಕನ್ನಡದಲ್ಲಿ ಎಲ್ಲಿವೆ ಹೇಳಿ?”

“ಅದು ನಿಜ.”

ಅದು ನಿಜವಾಗಿತ್ತು, ಆದರೆ ಹಾಗೆಂದು, ಕನ್ನಡವನ್ನು ದೂಷಿಸುವುದರಲ್ಲಿ ಅರ್ಥವಿರಲಿಲ್ಲ.