ಪುಟ:Duurada Nakshhatra.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮುಂದಿನ ಪೀರಿಯಡಿನಲ್ಲಿ ಎರಡನೆಯ ತರಗತಿಗೆ ಜಯದೇವ ಹೋದ. ಅಲ್ಲಿಯೂ ಆಗ ಕನ್ನಡವೇ.

ಅಲ್ಲಿ ಹಾಜರಿ ಕರೆದುದಾಗಿತ್ತು, ಬೇರೆ ಹಾದಿಯಿಲ್ಲದೆ ಒಂದೊಂದಾಗಿ ಎಲ್ಲರ ಹೆಸರನ್ನೂ ಕೇಳಿದ. ಎಷ್ಟೊಂದು ವಿಭಿನ್ನವಾದ ಹೆಸರುಗಳು! ದೇವರ ಸಹಸ್ರಹೆಸರುಗಳಿಲ್ಲದೇ ಹೋಗಿದ್ದರೆ ಎಷ್ಟೊಂದು ಕಷ್ಟವಾಗುತ್ತಿತ್ತೊ ನಾಮಕರಣ! ವಿವಿಧ ಜಾತಿಗಳು.ಇಲ್ಲಿ ಅಧ್ಯಯನಕ್ಕೆಂದು ಯಾವ ವ್ಯತ್ಯಾಸವೂ ಇಲ್ಲದೆ ಒಂದಾಗಿ ಕುಳಿತಿದ್ದರು.ಅಲ್ಲೆ ಕೊನೆಯ ಸಾಲಿನಲ್ಲಿ ಹರಿಜನರ ಇಬ್ಬರು ಹುಡುಗರೂ ಕೂಡಾ.

ಪಠ್ಯಪುಸ್ತಕದ ಹಾಳೆಗಳನ್ನು ಮಗುಚುತ್ತಾ ಮೊದಲ ಈ ಪೀರಿಯಡನ್ನು ಹೇಗೆ ಕಳೆಯೋಣವೆಂದು ಜಯದೇವ ಯೋಚಿಸಿದ.

ಹತ್ತನೆಯ ಪಾಠ, ಪುರಂದರದಾಸರು.

'ಈ ಪರಿಯ ಸೊಬಗಾವ ದೇವರೊಳು ಕಾಣೆ

ಗೋಪೀಜನಪ್ರಿಯ ಗೋಪಾಲಗಲ್ಲದೇ”

ಮೃದುಮಧುರವಾಗಿ ನಿನದಿಸಿತು ಆ ಹಾಡು ಜಯದೇವನ ಕಿವಿಯಲ್ಲಿ.ಅದು ಸುನಂದೆಗೆ ಬಲು ಪ್ರಿಯವಾದ ಹಾಡು. ಎಷ್ಟೊಂದು ಸೊಗಸಾಗಿ ಹಾಡುತ್ತಿದ್ದಳು ಅದನ್ನಾಕೆ!

“ಯಾರಾದರೂ ಈ ಪಾಠ ಓದ್ರಿರಾ? ಹತ್ತನೆಯ ಪಾಠ-ಮೂವತ್ತೆಂಟನೆಯ ಪುಟ”

ಹುಡುಗರು ಒಬ್ಬರೊಬ್ಬರ ಮುಖ ನೋಡಿದರು.

“ಯಾರು ಓದ್ತೀರಾ?

ಎರಡು ಕೈಗಳು ಮೇಲಕ್ಕೆ ಹೋದವು. ಅವರಲ್ಲಿ ಕಿರಿಯವನಾಗಿದ್ದ ಹುಡುಗನನ್ನು ಜಯದೇವ ಆರಿಸಿದ.

“ನೀನು ಓದಪ್ಪಾ..”

ಹುಡುಗ ಓದಿದ ಬಲು ವೇಗವಾಗಿ.

“ಸ್ವಲ್ಪ ನಿಧಾನಿಸಿ ಓದಪ್ಪಾ.”

ಆ ಹುಡುಗ ನಿಧಾನಿಸಿ, ಸ್ಫುಟವಾಗಿ, ಹೆಚ್ಚು ತಪ್ಪು ಉಚ್ಚಾರಗಳನ್ನು ಮಾಡದೆಯೇ ಓದಿದ,