ಪುಟ:Duurada Nakshhatra.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೋಡಿದ. ಅಲ್ಲಿದ್ದ ಮೆಚ್ಚುಗೆಯ ದೃಷ್ಟಿ....ಸಂದೇಹ ಕೇಳಲು ಬಂದ ಹುಡುಗಿಯಲ್ಲ ಈಕೆ, ಅದನ್ನು ನೆಪಮಾಡಿಕೊಂಡು ಪ್ರಭಾಮಣಿಯನ್ನು ಮುಂದಿಟ್ಟು ಬಂದಿದ್ದಾಳೆ--ಎಂದು ಜಯದೇವನಿಗೆ ಅನಿಸಿತು.

“ಹೆಡ್ಮೇಷ್ಟ್ರು ಬಂದ್ರು!” ಎಂದಳೊಬ್ಬಳು ಹುಡುಗಿ.

ಆಫೀಸು ಕೊಠಡಿಗೆ ವಿದ್ಯಾರ್ಥಿನಿಯರನ್ನು ಬರಬಿಟ್ಟುದು ತಪ್ಪಾಯಿತೇನೋ ಎಂದು ಜಯದೇವನಿಗೆ ಅಳುಕಿತು.

“ಗಂಟೆ ಬಾರಿಸೋ ಹೊತ್ತಾಯ್ತು, ಕ್ಲಾಸಿಗೆ ಹೋಗಿಮ್ಮಾ”

ಹುಡುಗಿಯರು ಹಿಂತಿರುಗುತಿದ್ದಾಗಲೆ ರಂಗರಾಯರು ಬಂದುಬಿಟ್ಟರು. ಆ ಮುಖದಲ್ಲಿದ್ದ ಶಾಂತತೆ ಜಯದೇವನನ್ನು ಚಕಿತಗೊಳಿಸಿತು.

“ಏನಮ್ಮ, ಪ್ರಭಾ – ಹೊಸ ಮೇಷ್ಟ್ರಿಗೆ ಹಾಯಾಗಿ ಕೂತಿರೋಕು ಬಿಡಲ್ವಲ್ಲೇ ನೀನು?” ಎಂದರು ಅವರು.

“ಏನೋ ಸಂಶಯ ಕೇಳ್ಬೇಕಾಗಿತ್ತು ಸಾರ್.”

ರಂಗರಾಯರು ಜಯದೇವನತ್ತ ತಿರುಗಿ ಹೇಳಿದರು :

“ಹೇಳ್ಕೊಟ್ರಾ, ಜಯದೇವ್? ಈ ಪ್ರಭಾಮಣಿ ಮೊದಲ್ನೇ ತರಗತಿಯಿಂದ ಈವರೆಗೂ ಹೀಗೆಯೇ, ಎಷ್ಟು ಹೇಳ್ಕೊಟ್ಟರೂ ತೃಪ್ತಿಯಿಲ್ಲ ಆವಳಿಗೆ !”

ಜಯದೇವ ಮುಗುಳುನಕ್ಕ.

ರಂಗರಾಯರು ಹೊರಹೊರಡುತ್ತಿದ್ದ ಹುಡುಗಿಯರನ್ನು ತಡೆದರು.

“ನಿಮಗೆ ಗೊತ್ತೇನ್ರೇ? ನನಗೆ ವರ್ಗವಾಯ್ತು, ಬೇರೆ ಊರಿಗೆ ಹೊರಠೋಗ್ತೀನಿ."

ಆ ಸ್ವರ ಕಂಪಿಸುತಿತ್ತು, ಒಳಗಿನ ಕೊರಗನ್ನು ತೋರಿಸಲೆಳಸಿದ ಭಾವನೆಗಳನ್ನೆಲ್ಲ, ಪ್ರಯತ್ನಪೂರ್ವಕವಾಗಿ ಅವರು ತಡೆಹಿಡಿದಿದ್ದರು.

ಆ ಹುಡುಗಿಯರ ಮುಖಗಳು ಕಪ್ಪಿಟ್ಟವು.

“ಇಲ್ಲಿಗೆ ಬೇರೆ ಯಾರು ಬರ್ತಾರೆ ಸಾರ್?”

“ಬಂದ್ದಿಟ್ಟಿದಾರೆ, ನೋಡ್ಲಿಲ್ವೇನು ನೀವು?

ಪ್ರಭಾಮಣಿ “ಇಲ್ಲ” ಎನ್ನುವುದಕ್ಕೂ ವೆಂಕಟರಾಯರೊಡನೆ ಸಂಜುಂಡಯ್ಯ ಬರುತಿದ್ದುದಕ್ಕೂ ಸರಿಹೋಯಿತು. -

“ಅಲ್ನೋಡಿ,” ಎಂದರು ರಂಗರಾಯರು.