ಪುಟ:Elu Suthina Kote.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನಿರಾಶೆಯ ಆಳದಿಂದ

This is the deadland
This is cactus land
-ELIOT

ನೋಡು
ಸಂಜೆ ಮುಗಿಲು ಕೆಂಪು ಕಳೆದು ನಿಂತಿದೆ.
ಹರೆಯದರಿವೆಯುಳಿದು ನಿಂತ
ಮುದುಕನಂತಿದೆ.
ರೂಪು, ಕಳೆಯನಿತ್ತ ಹಗಲು
ಕರಗಿ ಬರಲು ಕತ್ತಲು,

ತುಂಬು ಚೆಲುವ ಮೆರೆದ ಮುಗಿಲು
ಈಗಲೀಗ ಬೆತ್ತಲು.
ಅರ್ಥವಿರದ ಮಾತಿನಿಂತೆ
ಭಾವವಿರದ ಗೀತೆಯಂತೆ
ಮುಗಿಲು, ನೋಡು, ಬೆತ್ತಲು!

ಇಗೋ ಬಂತು ಬಂದೆ ಬಂತು ಸಂಜೆಗತ್ತಲು.
ಅರಿವುಗೊಡದೆ ಒಳಗೆ ಬರುವ 'ದೀನ ನಾನು' ಭಾವದಂತೆ,
ಸತ್ತ ಇಲಿಯ ನಾತದಂತೆ,
ನರನ ಕಳ್ಳ ಮನಸಿನಂತೆ,
ಬಂದು ಸಂಜೆಗತ್ತಲು
ಇಳೆಗೆಸೆಯಿತು, ಘಳಿಗೆಯಲ್ಲಿ ಕರಿ ಮುಸುಕನು ಸುತ್ತಲು.