ಪುಟ:Hosa belaku.pdf/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಜ್ಞಾನದ ವಿಷ

೧೦೧

ಯಾಂತ್ರಿಕ ಸಾಧನಗಳು. ಒಬ್ಬ ಮನುಷ್ಯ ಬಹಳವಾದರೆ ಇಬ್ಬರನ್ನು ತಡೆಹಿಡಿದು ನಿಲ್ಲಿಸಬಹುದು. ಆದರೆ ಯಂತ್ರ ಸಾಮರ್ಥ್ಯವಿದ್ದಾಗ-- ? ೫೦ ಜನರ ಕೆಲಸ, ಯಂತ್ರವಿದ್ದವನೊಬ್ಬ ಮಾಡಬಲ್ಲ. ಉಳಿದ ೪೯ ಜನರು--?

ಇದೇ ಬಗೆಹರಿಯದ ಸಮಸ್ಯೆಯನ್ನು ಬೀಡಿ ಕೂಲಿಕಾರರ ಕರಿಯ ಪತಾಕೆ ಚಟಪಟಿಸಿ ಜಗತ್ತಿಗೆ ಸಾರಿ ಹೇಳುತ್ತಿರುವಂತೆ ಭಾಸವಾಗುತ್ತಿತ್ತು. ಮತ್ತೆ ಕೂಲಿಕಾರರು ಕೇಕೆ ಹೊಡೆದರು:

"ರಾಜು ಮನುಷ್ಯನಲ್ಲ-ಅವನು ಪಶು, ರಾಕ್ಷಸ, ದಿಕ್ಕಾರ !"

ಆದರೆ ಈ ಕೂಗು ರಾಜುವಿನ ಕಿವಿಯನ್ನು ಮುಟ್ಟುವಂತಿರಲಿಲ್ಲ. ಕೇವಲ ಯಾಂತ್ರಿಕ ಸಾಧನವೇ ಅದನ್ನು––?

ನೀರಿನ ಪ್ರವಾಹಕ್ಕೆ ಎಷ್ಟು ಒಡ್ಡು ಕಟ್ಟಿದರೇನಾಯಿತು? ಅದು ಎಲ್ಲಿಯೋ ಸೆಲೆಯ ರೂಪವಾಗಿ ಹೊರಬರುತ್ತದೆ.

ಆ ಕೂಲಿಕಾರರ ತಂಡದಲ್ಲಿದ್ದ ಸುಬ್ಬಮ್ಮ ಸೆಲೆಯ ರೂಪವಾಗಿಯಾದರೂ ಆ ಪಡೆಯ ಗೋಡೆಯನ್ನೂ ಮುರಿದು ಒಳಹೋಗಬಯಸುತ್ತಿದ್ದಳು.

ಆದರೆ ಸಭಾಭವನದಲ್ಲಿ ಕೇವಲ ಆಮಂತ್ರಿತರಿಗಷ್ಟೆ ಪ್ರವೇಶವಿತ್ತು. ಉಳಿದವರಿಗೆ-ಯಾಂತ್ರಿಕ ಸಾಧನಗಳ ಮೂಲಕ-ರಾಜುವಿನ ಭಾಷಣವನ್ನು ಹೊರಗಿನಿಂದಲೇ ಕೇಳುವ ವ್ಯವಸ್ಥೆಯನ್ನು ಮಾಡಲಾಗಿತ್ತು.

ಆದರೂ ಸುಬ್ಬಮ್ಮ ಗೇಟಿನ ಬಳಿ ನಿಂತಿದ್ದ ಪೋಲಿಸ ಹವಾಲ್ದಾರನನ್ನು ಅಂಗಲಾಚಿ ಬೇಡಿಕೊಂಡಳು:

"ಅಣ್ಣಾ, ಈ ಮುದುಕಿ ಅಷ್ಟು ಒಳಗೆ ಹೋಗಿ ನೋಡಿ ಬರ್ತಾಳಪ್ಪಾ!"

ಪೋಲಿಸ ಹವಾಲ್ದಾರ ಮೊದಲು ನಕ್ಕು ಬಿಟ್ಟ. ಆದರೆ ಒಮ್ಮೆಲೆ ಸುಬ್ಬಮ್ಮನ ಗುರುತು ಹತ್ತಿತು. ಕುತೂಹಲಿಯಾಗಿ ಕೇಳಿದ: "ಅಲ್ಲ… ಸುಬ್ಬಮ್ಯಾ! ನಿನ್ನ ಮಗ ಭಾಂವಿ ಬಿದ್ದು ಸತ್ತು ನಾಲ್ಕು ದಿನಾ ಆತು ! ಈಗ ಸಭಾದಾಗಿನ ಮಂದಿನ್ನ ನೋಡ್ಲಾಕ ಬಂದೀಯಲ್ಲವ್ವಾ?"

ಮುದುಕಿ ಸುಬ್ಬಮ್ಮನ ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯತೊಡಗಿತು. ಅವಳ ಕಂಠದಿಂದ ಮಾತೇ ಹೊರಡಲಿಲ್ಲ. ಅವಳ ದುಃಖವನ್ನು ಕಂಡು ಮರುಗಿದ ಪೋಲಿಸ ಹವಾಲ್ದಾರನೇ ಮತ್ತೆ ಮಾತನಾಡಿಸಿದ: