ಪುಟ:Hosa belaku.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೦೬

ವಿಜ್ಞಾನದ ವಿಷ

ನೀನು ಬಡವಿ, ಪರೋಪಕಾರ ಮಾಡಲು ಹೊರಟೆ! ನೀನು ಕುಡಿಸಿದ ಹಾಲಿನಿಂದ ಪುಷ್ಟಗೊಂಡ ಘಟಸರ್ಪ ನನ್ನನ್ನು ಕಚ್ಚಿತು! ಇನ್ನು ನಿನ್ನನ್ನೂ ಕಚ್ಚುತ್ತದೆ. ಎಚ್ಚರ! ಸೇಡು! ಸೇಡು!! ನೀನು ಈಗ ಸೇಡು ತೀರಿಸಿಕೂಂಡರೆ ನನಗೆ ಸಮಾಧಾನ!"

ಸುಬ್ಬಮ್ಮನ ಕಣ್ಣುಗಳು ಇದ್ದುದಿದ್ದಂತೆಯೇ ಕೆಂಪಾದುವು. ಕ್ಷಣ ಕಾಲ ಅವಳ ಮುಖದ ಮೇಲಿಂದ ಪೈಶಾಚಿಕ ನಗುವೊಂದು ಮಿನುಗಿ ಮಾಯವಾತು. ಆ ನಿರಾಶೆಯ ನಗುವಿನಲ್ಲಿಯೇ "ಸೇಡು" ಎಂದುಸುರಿದಳು. ಆಗ ಮುದುಕಿಯ ಮುದುಡಿಯಾದ ಮುಖದಲ್ಲಿಯೂ ಉಗ್ರ ಕಳೆ ಕುಣಿದಾಡತೊಡಗಿತು. ಒಮ್ಮೆ ಎದೆಯ ಮೇಲೆ ಸೆರಗಿನ ಒಳಗೆ ಕೈಯಾಡಿಸಿ, ಸಮಾಧಾನದ ಒಂದು ದೀರ್ಘಶ್ವಾಸವನ್ನು ಬಿಟ್ಟಳು. "--ಆ ಸುಬ್ಬಮ್ಮ–-" ಲಾವುಡ್ ಸ್ಪೀಕರಿನಲ್ಲಿ ಕೇಳುತ್ತಿದ್ದ ರಾಜನ ಭಾಷಣ ಸುಬ್ಬಮ್ಮನನ್ನು ಎಚ್ಚರಿಸಿತು. ಸುಬ್ಬಮ್ಮ ಮತ್ತೆ ಧ್ವನಿವಾಹಕ ಕರ್ಣದತ್ತ ಕಿವಿಯನ್ನು ಹೊರಳಿಸಿದಳು. ರಾಜನ ಭಾಷಣ ನಡೆದೇ ಇತ್ತು.

"--ಆ ಸುಬ್ಬಮ್ಮ ನನ್ನನ್ನು ಈಗ ಮರೆತಿರಬಹುದು. ಆದರೆ ನಾನು ಅವಳನ್ನು ಮರೆಯುವುದು ಅಸಾಧ್ಯ. ಸ್ವಂತದ ಹಿತದ ಕಡೆಗೆ ಹೆಚ್ಚ ಲಕ್ಷಕೊಡದೆ ಪರೋಪಕಾರ ಧರ್ಮವನ್ನು ಪರಿಪಾಲಿಸಿದ ಸಾಧ್ವಿಯನ್ನು ಮರೆಯುವದೆಂತು ಸಾಧ್ಯ? ಅವಳನ್ನು ಈಗ ಯಾರಾದರೂ ಕರೆದು ತಂದರೆ, ನಾನು ಅವಳ ಕಾಲಿಗೆ ಬಿದ್ದು, ಧನ್ಯನಾಗುವೆ...."

ಸುಬ್ಬಮ್ಮನ ಹತ್ತಿರವೇ ನಿಂತಿದ್ದ ಪೋಲೀಸ ಹವಾಲ್ದಾರ, ರಾಜನ ಭಾಷಣ ಕೇಳುತ್ತಿರುವಂತೆ ಸ್ಪಂಭೀಭೂತನಾದ, "ಈ ಮುದುಕಿಯನ್ನೇ ಇವರು ಹೊಗಳುತ್ತಿದ್ದಾರಲ್ಲ--ಇವಳನ್ನೇ ಒಯ್ದು ಅವರ ಮುಂದೆ ನಿಲ್ಲಿಸಿದರೆ ತನ್ನ ಶೀಘ್ರ ಕರ್ತವ್ಯಕ್ಕೆ ಅಧಿಕಾರಿಗಳು ಮೆಚ್ಚಿಯಾರು!" ಎಂದು ತನ್ನಷ್ಟಕ್ಕೆ ವಿಚಾರಿಸಿ, ಆ ಮುದುಕಿಯ ಬಳಿ ಸಾರಿ ಮೃದುವಾಗಿ ಮಾತಾಡಿದ;

"ಸುಬ್ಬಮ್ಮಾ, ನೋಡು, ಸಾಹೇಬರು ಏನು ಮಾತಾಡಿದರು ಕೇಳಿದ್ಯಾ?"

"ಕೇಳಿದ್ನೆಪಾ!" ನಿರ್ವಿಕಾರಳಾಗಿ ಮುದುಕಿ ಉತ್ತರಿಸಿದಳು.