ಪುಟ:Hosa belaku.pdf/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಸ ಬೆಳಕು

೧೩

ತಲೆಯಿಂದ ಮಾಯವಾಗಿರಲಿಲ್ಲ. ಈಗಂತೂ ಗಂಡನ ಮಾತಿನಿಂದ ಅದು ಮತ್ತಷ್ಟು ಕೆರಳತೊಡಗಿತು. ಮತ್ತೆ ವಿಚಾರಿಸತೊಡಗಿದರು:

––ತಾನು ವಿಧವೆಯಾದ ಮೇಲೂ ಮುಜುಮ್‌ದಾರರು ತನ್ನನ್ನು ವರಿಸುವುದು ಸಾಧ್ಯವಿಲ್ಲ- ಬೇರೆ ಮಾರ್ಗ ತಾನಾಗಿಯೇ ಈ ದೇಹ ಅವರಿಗೆ–– ಆಹುದು––! ಪಕ್ವಾನ್ನದ ತಾಟನ್ನು ಬಡಿಸಿದರೆ, ಬೇಡವೆನ್ನುವ ಜನರಿದ್ದಾರೆಯೇ ?

"ಇಲ್ಲ” ಎಂದು ಅವರ ಮನಸ್ಸೇ ಉತ್ತರಿಸಿತು.

ಅವರ ಮನಸ್ಸು ಕೂಡ ಲಂಚ ತಿಂದ ಗುಮಾಸ್ತನ ಹಾಗೆ ಆಗಿತ್ತು. ಮತ್ತೆ ಮತ್ತೆ ವಿಚಾರಮಾಡಿ ಕೊನೆಯ ನಿರ್ಧಾರಕ್ಕೆಯೆ ಬಂದರು.

ನೀಲಿ ಕಾಗದದ ಮೇಲೆ ನಕ್ಷೆ ತಯಾರಿಸಿದ ನಂತರ, ಮನೆ ಕಟ್ಟುವುದಕ್ಕೇನು ತಡ ? ಅದರಲ್ಲಿ ಏನಾದರೂ ಸಂಭವಿಸಿದರೆ, ಹೆಸರು ಹೇಳಲಿಕ್ಕಾದರೂ ಗಂಡನ ಇರುವು ಅವಶ್ಯವೆಂಬುದನ್ನು ನಿರ್ಧರಿಸುವುದಕ್ಕೂ ಅವರು ಮರೆಯಲಿಲ್ಲ.

ಲೀಲಾಬಾಯಿ ಒಂದುಸಲ ಕೈಗಡಿಯಾರವನ್ನು ನೋಡಿಕೊಂಡರು. ಆರು ಹೊಡೆದಿತ್ತು. ಅಂದು ರೇಡಿಯೊದಲ್ಲಿ ತಮ್ಮ ಭಾಷಣವಿದ್ದುದನ್ನು ಜ್ಞಾಪಿಸಿಕೊಂಡು, ಮನೆಯಿಂದ ಹೊರಬಿದ್ದರು. ಅಂದೇ ತಮ್ಮ ಜತೆಯಲ್ಲಿ ರೆಡಿಯೋ ಸ್ಟೇಶನಿಗೆ ಬರಲು ಮುಜುಮ್‌ದಾರರನ್ನು ಕರೆದಿದ್ದರು. ಆದರೆ ಮುಜುಮ್‌ದಾರರ ಪತ್ನಿಯನ್ನು ಅಂದು ತವರ್ಮನೆಗೆ ಕಳಿಸುವುದಕ್ಕಾಗಿ ಸ್ಟೇಶನ್ನಿಗೆ ಅದೇ ವೇಳೆಗೆ ಹೋಗಬೇಕಾಗಿದ್ದುದರಿಂದ, ಕೊಂಚ ನೊಂದುಕೊಂಡಿದ್ದರು. ಅವರ ಜತೆಯಲ್ಲಿ ಬರೀ ಅಡ್ಡಾಡಿದುದರಿಂದಲೇ ಎಷ್ಟೋ ಶಾಂತಿ ಸಿಕ್ಕುತ್ತಿತ್ತು ಲೀಲಾಬಾಯಿಯವರಿಗೆ.

ರೇಡಿಯೋ ಕೇ೦ದ್ರ ತಲ್ಪಲು ಲೀಲಾಬಾಯಿಯವರಿಗೆ ತಡಹಿಡಿಯಲಿಲ್ಲ. ಅವರು ಅಲ್ಲಿಗೆ ಹೋದಾಗ ಆರುವರೆ ಹೊಡೆದಿತ್ತು. ಇನ್ನೂ ಅರ್ಧ ಗಂಟೆ ಕಾಲವಿದ್ದುದರಿಂದ, ಲೀಲಾಬಾಯಿ ಕೇಂದ್ರದ (Retiring Room)

ವಿಶ್ರಾಂತಿಕೋಣೆಯಲ್ಲಿ ಹೋಗಿ ಕುಳಿತರು. ಅಲ್ಲಿ ಅವರ ಬದಿಯಲ್ಲಿಯೇ ಒಬ್ಬ ಕುರುಡಿಯೂ ಕುಳಿತಿದ್ದಳು. ಕುರುಡಿಯಾಗಿದ್ದಳಿಷ್ಟೇ ಅಲ್ಲ; ಮುಖವೂ ಸುಂದರವಾಗಿರಲಿಲ್ಲ. ಅಲ್ಲಲ್ಲಿ ಕಪ್ಪು ಕಲೆಗಳಿದ್ದುವು.