ಪುಟ:Hosa belaku.pdf/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೊಸ ಬೆಳಕು

೧೬

ನೋಡಿಕೊಂಡರು. ತಮ್ಮ ಸೌಂದರ್ಯಕ್ಕೆ ತಾವೇ ಮರುಳಾದರು.

––ರಸಭರಿತ ತೊಂಡೆದುಟಿ, ಬಾಗಿದ ಹುಬ್ಬು, ನೀಲ ಕಣ್ಣು, ತುಂಬುಗಲ್ಲ––

'ಇಂತಹ ಸೌಂದರ್ಯ ತಾನಾಗಿಯೇ ಬಂದರೆ, ನಿರಾಕರಿಸುವ ಮೂರ್ಖರೂ ಇದ್ದಾರೆಯೇ ?' ಎಂದು ಒಂದು ಸಲ ತಮ್ಮನ್ನೇ ಕೇಳಿಕೊಂಡರು. ಈ ವಿಚಾರಗಳು ಮುಗಿಯುವ ಮೊದಲೇ ಅವರು, ಮುಜುಮ್‍ದಾರರ ಮನೆಯ ಮುಂಬಾಲಿಗೆ ಬಂದುಬಿಟ್ಟಿದ್ದರು.

ಮನೆ ಮಾಳಮರಡಿಯ ಕೊನೆಯ ಭಾಗದಲ್ಲಿ. ಮುಜುಮ್‌ದಾರರದೇ ಕೊ‍‍ನೆಯ ಮನೆ. ಆಗಲೇ ಕತ್ತಲೆ ಪಸರಿಸಿತ್ತು. ಮುಜುಮ್‍‌ದಾರರ ಮನೆಯ ಬಾಗಿಲು ಹಾಕಿತ್ತು. ಲೀಲಾಬಾಯಿಯವರೇನೋ ಬಾಗಿಲವರೆಗೆ ಬಂದರು, ಆದರೆ ಕೂಗಿ ಬಾಗಿಲು ತೆಗೆಸುವ ಧೈರ್ಯವಾಗಲಿಲ್ಲ. ಎದೆ ಬಡಿದುಕೊಳ್ಳುತ್ತಿತ್ತು, ಬೆವರು ಬಿಡಹತ್ತಿತು.

ಕೂಗಿ ಬಾಗಿಲು ತೆಗೆಸುವ ಧೈರ್ಯವಾಗದ್ದರಿಂದ, ಅವರು ಬದಿಯ ಕಿಡಿಕಿಯ ಬಳಿ ಸಾರಿದರು. ಒಳಗೆ ದೀಪ ಉರಿಯುತ್ತಿತ್ತು. ಒಳಗಿನ ದೃಶ್ಯ ನೋಡಿ ಲೀಲಾಬಾಯಿಯವರ ಪಿತ್ತ ನೆತ್ತಿಗೇರಿತು.

––ಮುಜುಮ್‌ದಾರರು ಮಂಚದಮೇಲೆ ಒಂದು ಹೆಣ್ಣಿನ ತಲೆಹಿಡಿದು ಅವಳಿಗೆ ಕಪ್ಪಿನಲ್ಲಿ ಏನೋ ಕುಡಿಸುತ್ತಿದ್ದರು. “ಹೆಂಡತಿಯನ್ನು ತವರ್ಮನೆಗೆ ಕಳಿಸಿ ಇತ್ತ ಈ ವ್ಯವಹಾರವೇ ? ” ಎಂದು ಲೀಲಾಬಾಯಿಯವರಿಗೆ ಮೊದಲು ಸಿಟ್ಟು ಬಂತು. ತದನಂತರ ಬಂದದ್ದು ಸವತಿ ಮಾತ್ಸರ್ಯದ ಸಿಟ್ಟು. ಆದರೆ ಮಾಡಬೇಕೇನೆಂಬುದು ತಿಳಿಯಲಿಲ್ಲ. ಅಲ್ಲಿಯೇ ನಿಂತರು. ಒಳಗೆ ಸಂಭಾಷಣೆಗೆ ಮೊದಲಾಯಿತು. ಲೀಲಾಬಾಯಿ ಜಾಗ್ರತೆಯಿಂದ ಲಾಲಿಸಹತ್ತಿದರು. "ನೀವೆಷ್ಟು ನನ್ನ ಸೇವೆ ಮಾಡುತ್ತಿದ್ದೀರಿ ? "

"ಮತ್ತಾರು ಮಾಡಬೇಕು ಹೇಳು ? !”
"ಶಾಲೆಯಲ್ಲಿ ದಿನವೂ ದಣಿದು ಬರುತ್ತೀರಿ; ಮತ್ತೆ ಮನೆಯಲ್ಲಿ ನನ್ನ ಸೇವೆ ! ಅಡಿಗೆಯವಳನ್ನಾದರೂ ಇಡಿರಿ ಎಂದರೆ ಅದಕ್ಕೂ ನೀವು ಒಪ್ಪೋದಿಲ್ಲ!"