ಪುಟ:Hosa belaku.pdf/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೆಳಗಿನ ನೆರಳು

೩೩

ಮನೆ ಸಿಟಿಯಲ್ಲಿದೆ."

ಯುವಕನ ಉತ್ತರದಿಂದ ಸುಬ್ಬನಿಗೆ ಸಮಾಧಾನವಾಗಲಿಲ್ಲ ಊರಲ್ಲೊಂದು ಮನೆ, ಕ್ಯಾಂಟೋನಮೆಂಟನಲ್ಲೊಂದು. ಒಂದೂ ತಿಳಿಯಲಿಲ್ಲ ಎಂದು ತನ್ನಷ್ಟಕ್ಕೆ ತಾನೇ ತಲೆ ತುರಿಸಿಕೊಂಡ.

ಅಷ್ಟರಲ್ಲಿ ಜವಾನ ಬಂದು ಬಾಗಿಲನ್ನು ತೆಗೆದ. ಮನೆಯಲ್ಲಿ ಯಾವ ಓರಣವೂ ಇರಲಿಲ್ಲ. ಹೊಸದಾಗಿಯೇ ಬಾಡಿಗೆ ಹಿಡಿದಿದ್ದು ಎಂದು ಅದರೊಳಗಿನ ವ್ಯವಸ್ಥೆಯಿಂದ ತಿಳಿಯಬಹುದಿತ್ತು. ಯುವಕ ತನ್ನ ಜವಾನನಿಗೆ ಸುಬ್ಬನ ಯೋಗ ಕ್ಷೇಮವನ್ನು ನೋಡಿಕೊಳ್ಳಲು ಹೇಳಿ, ತಾನು ಒಳಗೆ ಹೋದ.

ಜವಾನ ತುಂಬ ಮುದುಕನಾಗಿದ್ದ. ಸುಬ್ಬನನ್ನು ಒಂದು ಖೋಲಿಯಲ್ಲಿ ಬರಹೇಳಿ, ಅವನ ಊಟದ ತಟ್ಟೆಯನ್ನು ಅಣಿಮಾಡತೊಡಗಿದ.


ರಾತ್ರಿ ಹತ್ತು ಹೊಡೆದು ಹೋಗಿತ್ತು. ಸುಬ್ಬ ಎಷ್ಟೋ ದಿನಗಳ ನಂತರ ಹೊಟ್ಟೆ ತು೦ಬ ಊಟ ಕಂಡಿದ್ದ, ಏಳು ದಿನಗಳ ದಣಿವಿನ ಮೇಲೆ ಮೃಷ್ಟಾನ್ನ ಭೋಜನ ಸಿಕ್ಕಿದ್ದರಿಂದ ಅವನು ಕೂತಲ್ಲಿಯೇ ತೂಕಡಿಸತೊಡಗಿದ್ದ. ಹಾಗೇ ತೂಕಡಿಸುತ್ತಿರುವಂತೆ ಮಹಡಿಯ ಮೇಲಿಂದ ಯುವಕನ ಕೂಗು ಕೇಳಿಬಂತು, " ಸುಬ್ಬಾ, ಏ ಸುಬ್ಬಾ."

ಸುಬ್ಬ ಮೆಟ್ಟಿಲುಗಳನ್ನೇರಿ ಮೇಲೆ ನಡೆದ. ಒಂದು ಕೋಣೆಯಲ್ಲಿ ಯುವಕ ಕೂತಿದ್ದ. ಸುಬ್ಬ ಹೋಗಿ ಅವನೆದುರು ನಿಂತ.

ಯುವಕ ಸಾವಧಾನವಾಗಿ ಹೇಳತೊಡಗಿದ:"ನಾನು ನಿನ್ನನ್ನು ಕರೆದು ತಂದದ್ದು ಒಂದು ದೊಡ್ಡ ಕೆಲಸಕ್ಕೆ. ಇಂಥ ಕೆಲಸ ಮಾಡಲು ಅತಿಬಡವ, ಅತಿ ಪ್ರಾಮಾಣಿಕನಿರಬೇಕು. ನಿನ್ನಲ್ಲಿ ಎರಡನ್ನೂ ಕಂಡೆ. ನಿನ್ನಿಂದ ಆಗಬೇಕಾದ ಕೆಲಸ ಸ್ವಲ್ಪ ಕಠಿಣವಿದೆ. ಅದಕ್ಕೆ ನಿನ್ನ ಬೇಡಿಕೆ ಎಷ್ಟು ಹೇಳು."

"ಕೆಲಸವಾದರೂ ಏನು ಹೇಳಿ?"