ಪುಟ:Hosa belaku.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೬

ವೈರಾಗ್ಯ-ವೈಯ್ಯಾರ

ಗೊಪ್ಪಿಸಿದರು. ಬರೆಯುವ ಕೆಲಸದಿಂದ ಬೇಸರ ಬರುತ್ತಿದ್ದರೂ ಅಲ್ಲಿಯ ದೃಶ್ಯದಿಂದ ನನ್ನ ಮನರಂಜನೆ ಮಾತ್ರ ಆಗುತ್ತಿತ್ತು. ಸಾಲುಸಾಲಾಗಿ ನಿಂತ ಹೆಣ್ಣು ಮಕ್ಕಳು ಒಬ್ಬೊಬ್ಬರಾಗಿ ಬಂದು ಚುಚ್ಚಿಸಿಕೊಂಡ ತರುವಾಯ ವ್ಯಾಕ್ಸಿನೇಟರರು ಕೇಳುತ್ತಿದ್ದರು ––

"ನಿನ್ನ ಹೆಸರು, ನಿನ್ನ ಗಂಡನ ಹೆಸರು ಹೇಳಿ ಬರೆಸಿ ಹೋಗು."

ಅದಕ್ಕೆ ಆ ಹೆಣ್ಣು ಮಕ್ಕಳು ಹತ್ತು ನಿಮಿಷ ತೊದಲುತ್ತ, ನಾಚುತ್ತ, ಮುಖವನ್ನು ಸೆರಗಿನಿಂದ ಮುಚ್ಚಿಕೊಳ್ಳುತ್ತ ತಮ್ಮ ಗಂಡಂದಿರ ಹೆಸರನ್ನು ಹೇಳಿ, ಹುಲಿಯ ಕೈಯಿಂದ ಒಮ್ಮೆ ಪಾರಾದವರಂತೆ ಒಮ್ಮೆಲೆ ನುಸುಳಿ ಪಾರಾಗುತ್ತಿದ್ದರು. ಅವರು ತಮ್ಮ ಗಂಡಂದಿರ ಹೆಸರನ್ನು ಹೇಳುವ ದೃಶ್ಯ ನನಗೆ ಮದುವೆಯ ಸಂಭ್ರಮದ ನೆನಪನ್ನು ತಂದು ಕೊಡುತ್ತಿತ್ತು. ಹೀಗೆಯೇ ನನ್ನ ಕೈಗಳು ಬರೆಯುತ್ತಿರುವ ಕೆಲಸದಲ್ಲಿ ತೊಡಗಿದಾಗ-

"ನಡೀ ಮುಂದಕ ಎಲ್ಲವ್ವ, ಏಟ ನಾಚತಾಳ" ಎಂದು ಹೇಳುತ್ತಿರುವ ವಾಲೀಕಾರನ ಧ್ವನಿಯತ್ತ ನನ್ನ ದೃಷ್ಟಿ ಹೊರಳಿತು. ಹೊರಳಿದಲ್ಲಿಯೇ ನನ್ನ ದೃಷ್ಟಿ ನಟ್ಟು ಹೋಯಿತು. ಅದಕ್ಕೊಂದು ವಿಶಿಷ್ಟವಾದ ಕಾರಣವೂ ಇತ್ತು.

ಕುಲುಕುಲು ಮುಗುಳು ನಗೆ ತೋರುತ್ತ, ಜಾರಿದ ಸೆರಗನ್ನು ಸರಿಪಡಿಸಿಕೊಳ್ಳದೇ ಆ ಎಲ್ಲವ್ವ ವಾಲೀಕಾರನ ಜತೆಯಲ್ಲಿ ಸರಸಸಲ್ಲಾಪಕ್ಕೆ ತೊಡಗಿದ್ದಳು ಎಲ್ಲವ್ವನ ನಂಬರು ನಿಂತ ಸಾಲಿನಲ್ಲಿ ಹತ್ತನೇಯದಾಗಿತ್ತು. ವ್ಯಾಕ್ಸಿನೇಟರರ ಲಕ್ಷವೆಲ್ಲ ಮುಂದೆ ಬಂದ ವ್ಯಕ್ತಿಗಳು ಅಷ್ಟೇ ಇದ್ದಿತು. ಹತ್ತನೇ ನಂಬರಿನವರೆಗೆ ಅವರ ದೃಷ್ಟಿ ಮುಟ್ಟುತ್ತಿರಲಿಲ್ಲ. ನಾನು ಮಾತ್ರ ಕಳ್ಳಗಣ್ಣುಗಳಿಂದ ಕುತೂಹಲಿತನಾಗಿ ನೋಡುತ್ತಿದ್ದೆ.

ಆ ಎಲ್ಲವ್ವನ ಬೆಡಗು ಬಿನ್ನಾಣ ಆ ವೈಯ್ಯಾರ, ಅವಳು ವಾಲೀಕಾರನ ಜತೆಯಲ್ಲಿ ನಡೆಸಿದ ಕುಚೇಷ್ಟೆ, ಇವು ಹೆಚ್ಚಾದಂತೆ ನನ್ನ ಕುತೂಹಲ ಕೆರಳುತ್ತಿತ್ತು. ಅವರಿಬ್ಬರಲ್ಲಿಯೂ ಮಾತುಗಳು ನಡೆದಿದ್ದವು.

"ಊರಾಗ ಇದ್ದಾನೇನು ಮಾಂವ" ಎಂದು ವಾಲೀಕಾರ ಅವಳಿಗೆ ಕಣ್ಣು ಮಿಟುಕಿಸಿ ಗೇಲಿ ಮಾಡಿದ.