ಪುಟ:KELAVU SANNA KATHEGALU.pdf/೫೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

35

ತಿರುಕಣ್ಣನ ಮತದಾನ

ಕೆಲಸ ಕಳೆದುಕೊಂಡು ತಿಂಗಳು ಮೂರಾಗಿತ್ತು ನಿಜ. ಆದರೂ ಬೆಳಗ್ಗೆ
ಕಾರಖಾನೆಯ ಸಿಳ್ಳು ಕೇಳಿಸಿದಾಗ ತಿರುಕಣ್ಣನಿಗೆ ಎಚ್ಚರವಾಗಿಯೇ ಆಗು
ತಿತ್ತು. ಅಭ್ಯಾಸ ಬಲ. ಆದರೆ ಈಗ ಏಳಬೇಕಾದ್ದೇ ಇಲ್ಲವಲ್ಲ! ಎರಡನೆಯ
ಸಿಳ್ಳು ಕೇಳಿಸಿದಾಗಲಂತೂ ಮುಸುಕನ್ನು ಮತ್ತಿಷ್ಟು ಗಟ್ಟಿಯಾಗಿ ಹೊದೆದು
ಕೊಂಡು ತಿರುಕಣ್ಣ ಮಲಗುತ್ತಿದ್ದ. ಅವನ ಆರೇಳು ವರ್ಷದ ಮಗಳಂತೂ
ಏಳುವ ಗೊಡವೆಗೇ ಹೋಗುತ್ತಿರಲಿಲ್ಲ.
ಆದರೆ ಬೆಳಗ್ಗೆ ಆ ಸಿಳ್ಳಿನ ಜತೆಗೆ ಕಾರಿನೊಂದು ಕಿರಿಚಾಟ ಕೇಳಿಸಿತು.
ಒಂದೇ ಸಮನೆ ಕೂಗಿ ಕರೆಯುತ್ತಿದ್ದ ಹಾರನ್!
ಯಾರೋ ತನ್ನ ಗುಡಿಸಲಿನ ಬಾಗಿಲನ್ನೇ ತಟ್ಟಿದ ಹಾಗಾಯಿತು.
ಏನೋ ಅಪಾಯದ ಮುನ್ಸೂಚನೆ ಇದು-ಎಂದು ಅಂಜಿದ ತಿರುಕಣ್ಣ.
ಆದರೆ ಮೃದುವಾದ ಇಂಪಾದ ಒಂದು ಸ್ವರ ಕೇಳಿಸುತ್ತಿತ್ತು:
“ಮಿಸ್ಟರ್ ತಿರುಕಣ್ಣನ್, ಮಿಸ್ಟರ್ ತಿರುಕಣ್ಣನ್!”
ಆ ಜೀವಮಾನದಲ್ಲೇ ಮೊದಲ ಸಾರಿಗೆ ಅಂಥ ಸಂಬೋಧನೆ! ಅದೇನೋ
ಎಂಥ ಶಬ್ದವೋ ಆತನಿಗೆ ಅರ್ಥವೂ ಆಗಲಿಲ್ಲ.
ಆದರೂ ಆತ ಎದ್ದು, ಕಂಬಳಿ ಹೊದ್ದುಕೊಂಡು, ಬಾಗಿಲನ್ನು ಬದಿಗೆ
ಸರಿಸಿ ಬಾಗಿ ಹೊರಬಂದ.
ಥಳಥಳಿಸುವ ದೊಡ್ಡದೊಂದು ಕಾರು ದೂರದಲ್ಲಿ ನಿಂತಿತ್ತು. ಪಾಶ್ಚಾತ್ಯ
ರೀತಿಯಲ್ಲಿ ಉಣ್ಣೆಯ ಪೋಷಾಕು ಧರಿಸಿದ್ದ ಸಾಹೇಬರೊಬ್ಬರು ಅಲ್ಲಿ ಇದ್ದರು.
ಗುಡಿಸಲಿನ ಕೊಳಕು ಅಂಗಳದಲ್ಲಿ ಇನ್ನೊಬ್ಬ ಯುವಕ ನೂರಾರು ಹಾಳೆಗಳಿದ್ದ
ಒಂದು ಪುಸ್ತಕವನ್ನು ಕೈಯಲ್ಲಿ ಹಿಡಿದಿದ್ದ. ಬಾಗಿಲು ತಟ್ಟಿ ಹೇಳಿದ:
“ನೀವೇನೋ ತಿರುಕಣ್ಣನ್?”
“ನಾನೇ ಬುದ್ಧಿ, ತಿರುಕಣ್ಣ.”
ಪುಸ್ತಕವಿದ್ದವನು ಓದಿ ಹೇಳಿದ: