ಉತ್ಸಾಹಿತನಾಗಿ, ತನ್ನ ಇಚ್ಛೆ ಶೀಘ್ರದಲ್ಲಿಯೇ ಕೈಗೂಡುತ್ತದೆಂದು ನಂಬಿದ. ಉದ್ಯಾನವನ್ನು ಮಹಾದೇವಿ ಮೆಚ್ಚಿದುದು ತನ್ನನ್ನೇ ಮೆಚ್ಚಿದುದರ ಸಂಕೇತವೆಂದು ಭಾವಿಸಿದ. ತನ್ನ ಸೌಂದರ್ಯದೃಷ್ಟಿಯನ್ನು ಬೇರೆ ಮೆಚ್ಚಿ ಹೊಗಳಿದ್ದಳು. ಅವಳ ಮಾತುಗಳನ್ನು ನೆನೆನೆನೆದು ಕನಸನ್ನು ಕಟ್ಟುತ್ತಾ, ಮಹಡಿಯತ್ತ ತಿರುಗಿ ತಿರುಗಿ ನೋಡುತ್ತಾ ನಿಧಾನವಾಗಿ ನಡೆದ.
8
ಮಹಾದೇವಿ ಅರಮನೆಗೆ ಬಂದು ಮೂರು ನಾಲ್ಕು ದಿವಸಗಳು ಕಳೆದಿದ್ದುವು. ಕೌಶಿಕನ ಕನಸು ಕನಸಾಗಿಯೇ ಉಳಿದಿತ್ತು. ಅಲ್ಲದೆ ಅದು ಉಲ್ಬಣ ರೂಪವನ್ನು ತಳೆದಿತ್ತು. ಮಹಾದೇವಿಯ ಸೌಂದರ್ಯದ ಕೇವಲ ಸಾನ್ನಿಧ್ಯ ಮಾತ್ರವೇ ತೃಪ್ತಿಯನ್ನೀಯಬಹುದೆಂಬ ಅವನ ಭ್ರಮೆ ಹಾರಿಹೋಗಿತ್ತು. ನೇತ್ರಾನಂದಕರವಾದ ಅವಳ ಸೌಂದರ್ಯವನ್ನು ಕಂಡೊಡನೆಯೇ ಇತರ ಇಂದ್ರಿಯಗಳ ಶಕ್ತಿಯೂ ಜಾಗ್ರತಗೊಳ್ಳುವುದು. ಮನಸ್ಸು ಕಟ್ಟುಹರಿದ ಪಂಜಿನಂತಾಗುವುದು.
ಮಹಾದೇವಿಯೂ ತನ್ನ ಮುಂದಿನ ಮಾರ್ಗವೇನೆಂಬುದನ್ನು ಕಂಡು ಕೊಳ್ಳಲಾರದೆ ಕೌಶಿಕನ ಸಮಸ್ಯೆಯಲ್ಲಿ ಸಿಕ್ಕಿ ತೊಳಲಾಡುತ್ತಿದ್ದಳು.
ಒಮ್ಮೆ ಅವಳ ಮನಸ್ಸು ಹೀಗೆ ಆಲೋಚಿಸಿತು :
`ಎಂತಹ ಒಳ್ಳೆಯ ಅಭಿರುಚಿ ರಾಜನದು ! ಎಂತಹ ಸೌಂದರ್ಯದೃಷ್ಟಿ ! ಅಲ್ಲದೆ ಎಂತಹ ಸ್ನೇಹಪರ ! ಎಷ್ಟು ವಿಶ್ವಾಸದಿಂದ ತನ್ನನ್ನು ನೋಡುತ್ತಾನೆ' ಎಂದು ಮುಂತಾಗಿ ಮುಂದುವರೆಸುತ್ತಾ ಕೊನೆಗೆ : `ಇಂತಹ ಸುಸಂಸ್ಕೃತ ರಾಜನನ್ನು ನಾನೇಕೆ ಮದುವೆಯಾಗಬಾರದು.'
ಮರುಕ್ಷಣದಲ್ಲಿಯೇ ತನ್ನ ಮನಸ್ಸಿನ ದೌರ್ಬಲ್ಯವನ್ನು ಕಂಡು ಯಾರೋ ಹೊಡೆದೆಬ್ಬಿಸಿದಂತಾಯಿತು. ಸುಪ್ತಮನಸ್ಸಿನಲ್ಲಿ ಅಡಗಿದ್ದ ಕಾಮನೆಗಳನ್ನು, ದೌರ್ಬಲ್ಯವನ್ನು ಕಂಡು ಅಚ್ಚರಿಗೊಂಡಳು.
`ಹಾಗಾದರೆ ರಾಜನನ್ನು ಮದುವೆಯಾಗಬೇಕೆಂಬುದೇ ನಿನ್ನ ನಿಜವಾದ ಬಯಕೆಯೇ?' ಎಂದು ತನ್ನ ಭಾವನೆಗಳನ್ನು ಬೆನ್ನಟ್ಟಿ ಸುಪ್ತಮನಸ್ಸಿಗಿಂತಲೂ ಆಳವಾದ ಪ್ರಜ್ಞಾಲೋಕಕ್ಕೆ ಇಳಿದು ನೋಡಿದಳು. ಅಲ್ಲಿ ತನ್ನ ಆದರ್ಶದ ಉಜ್ವಲರೂಪ ಹೊಳೆದು ತೋರಿತು. ಅಂತಹ ನಿಸ್ಸೀಮನಿರಂಜನಪ್ರಭೆಯನ್ನು ಒಳಗೊಂಡ ತನ್ನ ಮನಸ್ಸು, ಕೌಶಿಕನ ಕತ್ತಲೆಗೆ ಒಳಗಾದುದನ್ನು ಕಂಡು ಪರಿತಪಿಸಿದಳು. ``ಭಾಪು ! ಸಂಸಾರವೇ !" ಎಂಬ ಉದ್ಗಾರ ಹೊರಬಿತ್ತು.