ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೧೪
ಕದಳಿಯ ಕರ್ಪೂರ


ನಿನ್ನ ಬರವೆನ್ನಸುವಿನ ಬರುವು ಬಾರಯ್ಯಾ
ಚೆನ್ನಮಲ್ಲಿಕಾರ್ಜುನಯ್ಯ ಬಂದಾನೆಂದು
ಬಟ್ಟೆಗಳ ನೋಡಿ ಬಾಯಾರುತ್ತಿಹೆನು.

ಎಂದು ಮುಂತಾಗಿ ಶರಣಸತಿ ಮಹಾದೇವಿ, ಮಹಾದೇವನನ್ನು ಕುರಿತು ಹಂಬಲಿಸುತ್ತಿದ್ದಳು. ಇಂತಹ ಮಾತುಗಳ ಅರ್ಥ, ರಸವಂತಿಗೆ ಸಂಪೂರ್ಣವಾಗಿ ಆಗದೇ ಹೋದರೂ ಏನೋ ಒಂದು ಅಪೂರ್ವ ಅನುಭವವಾದಂತಾಗುತ್ತಿತ್ತು. ಮಹಾದೇವಿಯಲ್ಲಿ ಅವಳ ಗೌರವ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿತ್ತು.

ಒಮ್ಮೆ ಮಹಾದೇವಿ ತನ್ನ ಗುರುಗಳಾದ ಗುರುಲಿಂಗದೇವರನ್ನು ನೋಡಬೇಕೆಂಬ ಅಭಿಪ್ರಾಯವನ್ನು ರಾಜನ ಮುಂದೆ ವ್ಯಕ್ತಪಡಿಸಿದಳು. ತಾನು ಇಲ್ಲಿಗೆ ಬಂದಂದಿನಿಂದ ಈ ಆಸೆ ಅವಳಲ್ಲಿ ತುಂಬಿದ್ದರೂ ಬೇಕೆಂದೇ ಇದುವರೆಗೂ ಅದನ್ನು ತಡೆದಿದ್ದು ಇಂದು ಅದನ್ನು ಕೌಶಿಕನಿಗೆ ಹೇಳಿದಳು.

"ಆಗಬಹುದು, ಅವರನ್ನು ಈ ಕೂಡಲೇ, ಕರೆಯಕಳುಹಿಸುತ್ತೇನೆ. ಕೌಶಿಕ ಹೇಳಿದ. ಅದಕ್ಕೆ ಮಹಾದೇವಿ ನಗುತ್ತಾ ನುಡಿದಳು :

"ನೀವು ಹೇಳಿ ಕಳುಹಿಸಿದ ಕೂಡಲೇ, ನಿಮ್ಮ ರಾಜಮರ್ಯಾದೆಯನ್ನು ಆಶಿಸಿ ಓಡಿಬರುವ ಶಾಲುಜೋಡಿಯ ಪಂಡಿತರಲ್ಲ ನಮ್ಮ ಗುರುಗಳು. ಅವರು ಇಲ್ಲಿಗೆ ಬರಲಾರರು. ನಾನೇ ಅಲ್ಲಿಗೆ ಹೋಗಿಬರಬೇಕಾಗುತ್ತದೆ.

ಮಹಾದೇವಿ ಗುರುಲಿಂಗರ ಮಠಕ್ಕೆ ಹೋಗುವ ಸಿದ್ಧತೆಯಾಗತೊಡಗಿತು. ಕೌಶಿಕ ವಸಂತಕನನ್ನು ಬರಮಾಡಿಕೊಂಡು ಆಲೋಚಿಸಿದ. ತನ್ನ ಮನೆಗೆ ಹೋಗುವ ಹಂಚಿಕೆಯನ್ನೇನಾದರೂ ಮಹಾದೇವಿ ಮಾಡಿದ್ದಾಳೆಯೇ ಎಂಬ ಭಾವನೆ ಅವನಲ್ಲಿ ಸುಳಿಯುತ್ತಿತ್ತು.

"ಇಲ್ಲ ರಾಜೇಂದ್ರ, ಮಹಾದೇವಿ ದಿಟ್ಟಸ್ವಭಾವದವಳು. ಹಾಗೆ ಮನೆಗೆ ಹೋಗುವವಳಾಗಿದ್ದರೆ ಹೇಳಿಯೇ ಹೋಗುವಂತಹವಳು ವಸಂತಕ ಹೇಳಿದ.

"ಅದು ನಿಜ. ಆದರೂ ಅವಳ ಜೊತೆಯಲ್ಲಿ ಮಠಕ್ಕೆ ನೀನೇ ಹೋಗುವುದು ಒಳ್ಳೆಯದು, ವಸಂತಕ. ಆದಷ್ಟು ಜಾಗ್ರತೆಯಾಗಿ ಕರೆದುಕೊಂಡು ಬಂದುಬಿಡಬೇಕು. ರಾಜ ಹೇಳಿದ ವಸಂತಕನಿಗೆ.

ಮೇನೆ ಸಿದ್ಧವಾಯಿತು. ಮಹಾದೇವಿ ರಸವಂತಿಯನ್ನೂ ಜೊತೆಯಲ್ಲಿ ಕರೆದುಕೊಂಡು ಬಂದು ಕುಳಿತಳು ಮೇನೆಯಲ್ಲಿ. ಅದು ಹೊರಡುವುದಕ್ಕೆ ಮುನ್ನವೇ ಊರಿನಲ್ಲೆಲ್ಲಾ ಸುದ್ದಿ ಹೊರಟಂತೆ ತೋರುತ್ತಿತ್ತು. ಕುತೂಹಲದಿಂದ ಸೇರಿದ ಜನ ಜಂಗುಳಿ ಅಲ್ಲಲ್ಲಿ ನಿಂತು ನೋಡುತ್ತಿತ್ತು. ಈ ಘಟನೆ ನಡೆದಂದಿನಿಂದ