``ಹುಚ್ಚು ಹಿಡಿದಿದೆ, ಅವ್ವಾ. ನೀವು ಮದುವೆ ಮದುವೆ ಎನ್ನುತ್ತಿದ್ದಿರಿ. ಆ ಗಂಡನನ್ನು ಹುಡುಕಿ ಪಡೆಯುವ ಹುಚ್ಚಿನಿಂದ ಹೊರಟಿದ್ದೇನೆ.
``ಇದೇನು ಮಹಾದೇವಿ, ಏನು ನೀನು ಹೇಳುತ್ತಿರುವುದು ? ಓಂಕಾರ ಕೇಳಿದ.
``ಹೌದು, ಅಪ್ಪ ! ಇನ್ನು ನಾನಿಲ್ಲಿ ಇರಲಾರೆ. ಕಲ್ಯಾಣದತ್ತ ಹೊರಟಿದ್ದೇನೆ. ಅಲ್ಲಿ ನನ್ನ ಮಾರ್ಗವನ್ನು ಕಂಡುಕೊಳ್ಳುತ್ತೇನೆ. ನನ್ನ ಪತಿಯನ್ನು ಹುಡುಕಿ ಅವನನ್ನು ಪಡೆಯುತ್ತೇನೆ. ಅದಕ್ಕೆ ಗುರುಗಳ ಆಶೀರ್ವಾದವೂ ಇದೆ.
ಓಂಕಾರ ಗುರುಗಳತ್ತ ನೋಡಿದ. ಗುರುಗಳು ಹೇಳಿದರು :
``ನಿಜ ಓಂಕಾರ. ನಿಮ್ಮ ಮಗಳು ವಿಶ್ವಪತಿಯನ್ನು ಮದುವೆಯಾಗಿ ವಿಶ್ವಸತಿಯಾಗಲು ಹೋಗುತ್ತಿದ್ದಾಳೆ. ಅವಳನ್ನು ಹರಸಿ ಬೀಳ್ಕೊಡಿ.
ಲಿಂಗಮ್ಮನಿಗೆ ದುಃಖ ಉಕ್ಕಿಬಂದಿತು.
``ಇದೇನು, ಗುರುಗಳೇ ! ನೀವೂ ಹೀಗೆ ಹೇಳುತ್ತಿದ್ದೀರಿ. ಈ ನನ್ನ ಕಂದಮ್ಮ ಕಲ್ಯಾಣಕ್ಕೆ ಹೋಗುವುದೆಂದರೇನು ? ಕಷ್ಟವನ್ನೇ ಅರಿಯದ ಮುದ್ದು ಮಗು ಇದು. ಇದೇಕೆ ಮಗಳೇ ನಿನಗೆ ಈ ಬುದ್ಧಿ ಬಂದಿತು. ಹೆತ್ತ ತಂದೆತಾಯಿಗಳನ್ನು ಬಿಟ್ಟು ಹೋಗುವಷ್ಟು ನಿಷ್ಠುರಳಾದೆಯಾ? ನಿನಗೆ ನಾವೇನು ಕಷ್ಟವನ್ನು ಕೊಟ್ಟಿದ್ದೇವೆ? ಇಲ್ಲಿ ನಿನಗೇನು ತೊಂದರೆಯಾಗಿದೆ ? ಎಂದು ಮುಂತಾಗಿ ದುಃಖದ ಆವೇಗದಲ್ಲಿ ಮನಬಂದಂತೆ ಬಡಬಡಿಸಿದಳು ಲಿಂಗಮ್ಮ.
ಮಹಾದೇವಿ ಹೇಳಿದಳು :
``ನೀವೇನೂ ಕಷ್ಟವನ್ನು ಕೊಟ್ಟಿಲ್ಲ, ಅವ್ವಾ. ನನ್ನ ಕಷ್ಟ ನನಗೇ ಗೊತ್ತು; ಕಿಚ್ಚಿಲ್ಲದ ಬೇಗೆಯಲ್ಲಿ ಬೆಂದೆನವ್ವಾ ! ಏರಿಲ್ಲದ ಗಾಯದಲ್ಲಿ ನೊಂದೆನವ್ವಾ ! ಸುಖವಿಲ್ಲದೆ ಧಾವತಿಗೊಂಡೆನವ್ವಾ - ಚೆನ್ನಮಲ್ಲಿಕಾರ್ಜುನನನ್ನು ಒಲಿದ ನನ್ನ ದುಃಖ ನನಗೇ ಗೊತ್ತು. ಆದುದರಿಂದ ನನ್ನನ್ನು ತಡೆಯಬೇಡ, ಅವ್ವಾ !
``ಇಂತಹ ಮಾತನ್ನು ಆಡಬೇಡ, ಮಗಳೇ. ಇಲ್ಲಿಯೇ ಇದ್ದು ನಿನ್ನ ಸಾಧನೆಯನ್ನು ಮಾಡು. ನೋಡು ನಿನ್ನ ಗೆಳತಿಯರೆಲ್ಲರೂ ನಿನ್ನನ್ನು ನೋಡಲು ಬಂದಿದ್ದಾರೆ. ಅವರ ಮಾತನ್ನು ಕೇಳು.
ಗೆಳತಿಯರೆಲ್ಲರೂ ಅನೇಕ ರೀತಿಯಲ್ಲಿ ಅವಳನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ ಎಲ್ಲಾ ವ್ಯರ್ಥವಾಯಿತು. ಅವರಿಗೆ ಹೇಳಿದಳು :
ಗೆಳತಿಯರಿರಾ, ನಿಮ್ಮ ವಿಶ್ವಾಸದಲ್ಲಿ ಬೆಳೆದಿದ್ದೇನೆ. ಆದರೆ ನನ್ನ ನೋವನ್ನು ತಿಳಿಯಲಾರಿರಿ: