ಪುಟ:Kadaliya Karpoora.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿಗಂಬರದ ದಿವ್ಯಾಂಬರೆ

೧೪೩

ಬಂಜೆ ಬೇನೆಯನರಿಯಳು, ಬಲದಾಯಿ ಮುದ್ದು ಬಲ್ಲಳೆ ?

ನೊಂದ ನೋವ ನೋಯದವರೆತ್ತ ಬಲ್ಲರು ?

ಚೆನ್ನಮಲ್ಲಿಕಾರ್ಜುನಾ, ನೀನಿರಿದಲಗು ಒಡಲಲ್ಲಿ ಮುರಿದು

ಹೊರಳುವಳ ನೀವೆತ್ತ ಬಲ್ಲಿರೇ ಎಲೆ ತಾಯಿಗಳಿರಾ ?

``ನೀನೊಬ್ಬಳೇ ಅಷ್ಟು ದೂರ ಹೇಗೆ ಹೋಗುತ್ತಿ ? ಈ ದೀರ್ಘ ಪ್ರಯಾಣದಲ್ಲಿ ಜೊತೆಗೆ ಯಾರು ಬರುತ್ತಾರೆ ? ಊಟಕ್ಕೇನು, ಉಪಚಾರಕ್ಕೇನು? ಬುದ್ಧಿಗಿದ್ಧಿ ಇದೆಯೊ ಇಲ್ಲವೋ? - ಎಂಬ ಸುಖಿಯರ ಪ್ರಶ್ನೆಗೆ ಅವಳ ದಿಟ್ಟತನದ ಉತ್ತರ :

``ಇಲ್ಲ, ನನ್ನ ಬುದ್ಧಿಯೆಲ್ಲಾ ಒಂದೇ ಕಡೆಯಲ್ಲಿ ಲೀನವಾಗಿಹೋಗಿದೆ. ಊಟ ಉಪಚಾರಕ್ಕೆ ಯೋಚಿಸಬೇಡಿ :

ಹಸಿವಾದೊಡೆ ಭಿಕ್ಷಾನ್ನಗಳುಂಟು,

ತೃಷೆಯಾದೊಡೆ ಕೆರೆ ಹಳ್ಳ ಬಾವಿಗಳುಂಟು,

ಶಯನಕ್ಕೆ ಹಾಳುದೇಗುಲಗಳುಂಟು,

ಚೆನ್ನಮಲ್ಲಿಕಾರ್ಜುನಯ್ಯ, ಆತ್ಮಸಂಗಾತಕ್ಕೆ ನೀನೆನಗುಂಟು.

ಲಿಂಗಮ್ಮ ಮಗಳ ಕೈಹಿಡಿದುಕೊಂಡು ದೈನ್ಯದಿಂದ ಕೇಳಿದಳು :

``ನಮ್ಮ ಜೀವನಕ್ಕೆ ಬೆಳಕಾಗಿ ಇರುವವಳು ನೀನೊಬ್ಬಳೇ ಮಗಳೇ. ನಮ್ಮ ಕೈಬಿಡಬೇಡು. ನೀನು ಎದುರಿಗಿದ್ದರೆ ಸಾಕು. ಅದೇ ನಮ್ಮ ಜೀವನಕ್ಕೆ ಅವಲಂಬನೆ. ನಿನ್ನನ್ನು ಬೇಡಿಕೊಳ್ಳುತ್ತೇನೆ - ನಮ್ಮ ಕೈಬಿಡಬೇಡ, ತಿರಸ್ಕರಿಸಬೇಡ.

ಮಹಾದೇವಿ ಧರ್ಮಸಂಕಟಕ್ಕೆ ಗುರಿಯಾದಳು. ಜಗತ್ತಿನ ಬಾಂಧವ್ಯಗಳಲ್ಲೆಲ್ಲಾ ಬಲವತ್ತರವಾದುದು ತಾಯಿಯ ಕರುಳು. ಅಂತಹ ತಾಯಿಯೇ ಕೈಹಿಡಿದು ಬೇಡುತ್ತಿದ್ದಾಳೆ. ತಂದೆ ಮಾತನಾಡದಿದ್ದರೂ ಮೂಕವೇದನೆಯನ್ನು ವ್ಯಕ್ತಪಡಿಸುತ್ತಾ ನಿಂತಿದ್ದಾನೆ. ಏನು ಮಾಡಬೇಕು ? ಒಂದು ಕಡೆ ಕರ್ತವ್ಯದ ಕರೆ ; ಇನ್ನೊಂದು ಕಡೆ ಬಾಂಧವ್ಯದ ಮೊರೆ. ಕ್ಷಣಕಾಲ ಮಹಾದೇವಿಯ ಅಂತರಂಗದಲ್ಲಿ ವಿಪ್ಲವವೇ ನಡೆಯಿತು. ಕೊನೆಯಲ್ಲಿ ಕರ್ತವ್ಯದ ಕರೆ, ಜಯವನ್ನು ಪಡೆಯಿತು.

``ಅವ್ವಾ, ನನ್ನನ್ನು ಈ ಧರ್ಮಸಂಕಟದಿಂದ ಬಿಟ್ಟುಬಿಡು. ನನಗೆ ಹೋಗಲು ಅನುಮತಿಯನ್ನು ಕೊಡು.

ಇಲ್ಲ, ಮಗಳೇ... ಖಂಡಿತ ನೀನು ಹೋಗಕೂಡದು. ನಾನು ಒಪ್ಪಿಗೆಯನ್ನು ಕೊಡಲಾರೆ.