ವಿಷಯಕ್ಕೆ ಹೋಗು

ಪುಟ:Kadaliya Karpoora.pdf/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೫೬
ಕದಳಿಯ ಕರ್ಪೂರ


ನಮ್ಮ ಊರಿನಲ್ಲಿ ಪ್ರವಚನದ ಪದ್ಧತಿಯನ್ನು ಪ್ರಾರಂಭಿಸಿರಲಿಲ್ಲ. ನಿಮ್ಮ ಊರಿನ ಮಠದಲ್ಲಿ ನನ್ನ ಪ್ರವಚನವಿತ್ತು. ಆಗ ನಿನ್ನ ತಂದೆತಾಯಿಗಳ ಪರಿಚಯವಾಯಿತು. ಎಷ್ಟೋ ಸಾರಿ ನಿಮ್ಮ ಮನೆಯ ಆತಿಥ್ಯವನ್ನು ಸ್ವೀಕರಿಸಿದ್ದೇನೆ. ಎಂತಹ ನಿಷ್ಠಾವಂತ ಭಕ್ತರಮ್ಮ ಅವರು ! ಅವರೇಕೆ ಹೀಗಾದರು ಎಂದು ನನಗೆ ಆಶ್ಚರ್ವಾಯಿತು.

ಅವರು ಹೇಳಿದ ಕೊನೆಯ ಮಾತು ಮಹಾದೇವಿಗೆ ಅರ್ಥವಾಗಲಿಲ್ಲ.

``ಅಂದರೆ... ತಾನು ಏನನ್ನು ಕುರಿತು ಹಾಗೆ ಹೇಳುತ್ತಿದ್ದೀರೋ ತಿಳಿಯಲಿಲ್ಲ - ಮಹಾದೇವಿ ಕೇಳಿದಳು.

``ಅಲ್ಲಮ್ಮ, ಆ ರಾಜ ಹೇಳಿಕಳುಹಿಸಿದಮಾತ್ರಕ್ಕೆ ಅವನಿಗೆ ಹೆದರಿ, ನಿನ್ನನ್ನು ಹಾಗೆ ಕಳುಹಿಸಿಬಿಡುವುದೇ ಆತನ ಬಳಿಗೆ ? - ಶಿವಯ್ಯನವರು ಕೇಳಿದರು.

ಮಹಾದೇವಿಗೆ ಈ ಮಾತಿನಿಂದ ದುಃಖವಾಯಿತು. ತನ್ನ ವರ್ತನೆಯನ್ನು ಜಗತ್ತು ಹೇಗೆ ಖಂಡಿಸಿದೆಯೆಂಬುದರ ಅರಿವಾಯಿತು. ಅವಳಿಗೆ ತನ್ನ ತಂದೆತಾಯಿಗಳ ಮೇಲೆ ಬಂದ ವ್ಯರ್ಥವಾದ ಆರೋಪವನ್ನು ಕಂಡು ಮರುಗಿದಳು.

`ರಾಜನಿಗೆ ಹೆದರಿ ನನ್ನನ್ನು ಕಳುಹಿಸಿದರೇ, ರಾಜನ ಬಳಿಗೆ ! ಛೇ ಅಂತಹ ತಂದೆ-ತಾಯಿಗಳೇ ಅವರು ! ಆದರೆ ರಾಜನ ಬಳಿಗೆ ಹೋದ ನನ್ನ ಮಹತ್ವದ ಉದ್ದೇಶ ಸಾಧನೆಯ ಕಲ್ಪನೆಯನ್ನು, ಜನ ಹೇಗೆ ಅರಿಯಬಲ್ಲರು !'

ತನ್ನ ನಿಜಸ್ಥಿತಿಯನ್ನೆಲ್ಲಾ ಶಿವಯ್ಯನವರಿಗೆ ವಿವರಿಸಬೇಕೆನ್ನಿಸಿತು. `ಸಾಮಾನ್ಯಜನ ಏನಾದರೂ ತಿಳಿದುಕೊಳ್ಳಲಿ. ಆದರೆ ಶಿವಯ್ಯನವರಂತಹವರಾದರೂ ನನ್ನ ಮಾತುಗಳನ್ನು ತಿಳಿದುಕೊಳ್ಳಬಲ್ಲರು, ನಂಬಬಲ್ಲರು' ಎಂದು ಆಲೋಚಿಸುತ್ತಾ ನಡೆದುದನ್ನೆಲ್ಲಾ ವಿವರಿಸತೊಡಗಿದಳು.

ತನ್ನ ಮನೋಧರ್ಮವನ್ನು ಹೇಳಿದಳು. ತನ್ನ ಗುರುಗಳು ಮಾರ್ಗದರ್ಶನ ಮಾಡಿದ ಬಗೆಯನ್ನು ತಿಳಿಸಿದಳು. ತಂದೆತಾಯಿಗಳು ರಾಜನ ಬೆದರಿಕೆಗೆ ಸೊಪ್ಪು ಹಾಕದೆ ಪ್ರತಿಭಟಿಸಿ ನಿಂತುದನ್ನೂ, ತಾನೇ ಅದನ್ನು ತಪ್ಪಿಸಿ ಅರಮನೆಯನ್ನು ಸೇರಿದುದನ್ನೂ, ಅದರ ಹಿಂದಿದ್ದ ಕಾರಣವನ್ನೂ ತಾನು ಹಾಕಿದ ನಿಯಮಗಳನ್ನೂ ನಿರೂಪಿಸಿದಳು, ಶಿವಯ್ಯನವರು ಅಲ್ಲಿ ಪ್ರಶ್ನೆಗಳನ್ನು ಹಾಕುತ್ತಾ ವಿಷಯವನ್ನು ಸ್ಪಷ್ಟಪಡಿಸಿಕೊಳ್ಳುತ್ತಿದ್ದರು.

ಕೊನೆಯಲ್ಲಿ ತಾನು ಅರಮನೆಯನ್ನು ಬಿಡಲು ಕಾರಣವಾದ ಘಟನೆಯನ್ನು ಹೇಳುತ್ತಾ ಹೋದಂತೆ ಅವರ ಮಾತೂ ಮೌನವಾಯಿತು. ಗಂಭೀರವಾಗಿ ಕೇಳುತ್ತಿದ್ದರು ಎಲ್ಲರೂ. ಕುತೂಹಲವು ಗೌರವಕ್ಕೆ ತಿರುಗುತ್ತಿತ್ತು.