ಚನ್ನಮಲ್ಲಿಕಾರ್ಜುನನ ಕೈವಿಡಿದು
ನಿಮ್ಮ ತಲೆಗೆ ಹೂವ ತಹೆನಲ್ಲದೆ ಹುಲ್ಲ ತಾರೆನವಧಾರಿಸಿ.
ನಿಮ್ಮಡಿಗಳೆಲ್ಲರು ಮರಳಿ ಬಿಜಯಂಗೆಯ್ವುದು ;
ಶರಣು ಶರಣಾರ್ಥಿ.
ಗಂಭೀರವಾದ ಅಮೃತಮೇಘದ ಮೊಳಗಿನಂತೆ ಒಂದೊಂದೇ ನುಡಿ, ಮಹಾದೇವಿಯ ಅಂತಃಕರಣದಿಂದ ಉಕ್ಕಿಬರುತ್ತಿತ್ತು.
“ಶರಣು ಶರಣಾರ್ಥಿ” ಎಂದು ಮತ್ತೊಮ್ಮೆ ಹೇಳುತ್ತಾ ವೇಗವೇಗವಾಗಿ ನಡೆಯ ತೊಡಗಿದಳು, ಹಿಂತಿರುಗಿ ನೋಡದಂತೆ.
ಅವಳ ದಿವ್ಯವಿಗ್ರಹ ಮರೆಯಾಗುವವರೆಗೂ ಶರಣರೆಲ್ಲಾ ಚಿತ್ರದಲ್ಲಿ ಬರೆದವರಂತೆ ನಿಂತು ನೆಟ್ಟದೃಷ್ಟಿಯಿಂದ ಅತ್ತಲೇ ನೋಡುತ್ತಿದ್ದರು. ದೂರದ ರಸ್ತೆಯ ತಿರುವಿನಲ್ಲಿ ಮಹಾದೇವಿ ಮರೆಯಾದಳು. ಶರಣರೆಲ್ಲಾ ಒಬ್ಬರ ಮುಖವನ್ನೊಬ್ಬರು ನೋಡಿದರು. ಒಬ್ಬರನ್ನೊಬ್ಬರು ಹೊಸದಾಗಿ ಗುರುತಿಸುವಂತಿತ್ತು ಆ ನೋಟ.
ಪ್ರಭುದೇವನೇ ಮುಂದಾಗಿ ಮತ್ತೆ ಕಲ್ಯಾಣದ ಕಡೆಗೆ ನಡೆಯತೊಡಗಿದ. ಅವನನ್ನು ಹಿಂಬಾಲಿಸಿತು ಬಸವಾದಿ ಪ್ರಮಥಗಣ.
೬
ಶ್ರೀಗಿರಿಯತ್ತ ನಡೆಯುತ್ತಿದ್ದ ಮಹಾದೇವಿಯ ಮನಸ್ಸಿನ ಮುಂದೆ, ತನ್ನ ಜೀವನದ ಘಟನೆಗಳೆಲ್ಲಾ ಸುರುಳಿ ಬಿಚ್ಚಿದ ಪಟದಂತೆ ಎದುರು ನಿಲ್ಲುತ್ತಿದ್ದುವು. ದೂರ ಕುಳಿತು ನೋಡುವ ಪ್ರೇಕ್ಷಕನಂತೆ ಅವೆಲ್ಲವನ್ನೂ ತಾನು ಬೇರೆ ನಿಂತು ನೋಡುತ್ತಾ ಸೃಷ್ಟಿಕರ್ತನ ಲೀಲಾವಿಲಾಸಕ್ಕೆ ಬೆರಗಾಗುತ್ತಿದ್ದಳು.
ಪ್ರಭುದೇವನ ಒಂದು ವಚನ ಅವಳ ನೆನಪಿಗೆ ಬಂದಿತು :
ಎತ್ತಣ ಮಾಮರ ? ಎತ್ತಣ ಕೋಗಿಲೆ ?
ಎತ್ತಣಿಂದೆತ್ತ ಸಂಬಂಧವಯ್ಯ ?
ಬೆಟ್ಟದ ನೆಲ್ಲಿಕಾಯಿ, ಸಮುದ್ರದೊಳಗಣ ಉಪ್ಪು ;
ಎತ್ತಣಿಂದೆತ್ತ ಸಂಬಂಧವಯ್ಯ ?
ಗುಹೇಶ್ವರ ಲಿಂಗಕ್ಕೆಯು ಎನಗೆಯು
ಎತ್ತಣಿಂದೆತ್ತ ಸಂಬಂಧವಯ್ಯ ?