“ನಾನೂ ಕನ್ನಡನಾಡಿನವನೇ, ತಾಯಿ. ಮಲ್ಲಿಕಾರ್ಜುನನ ಪ್ರಧಾನ ಅರ್ಚಕ ವೃಂದ ಕನ್ನಡನಾಡಿನದು. ಶ್ರೀಶೈಲದೊಡನೆ ಕನ್ನಡನಾಡಿನ ಸಂಬಂಧ ಬಹಳ ನಿಕಟವಾದುದು.”
ಮಹಾದೇವಿಗೆ ತುಂಬಾ ಸಂತೋಷವಾಯಿತು. ಆ ಮಾತುಗಳನ್ನು ಕೇಳಿ ಹೇಳಿದಳು :
“ಆ ನಿಕಟವಾದ ಸಂಬಂಧವನ್ನು ಇನ್ನೂ ಹೆಚ್ಚು ಹತ್ತಿರಗೊಳಿಸುವುದಕ್ಕಾಗಿ ನಾನು ಇಲ್ಲಿಯೇ ಉಳಿದಿದ್ದೇನೆ. ನಾನು ಹಿಂದಿರುಗಿ ಹೋಗುವುದಕ್ಕಾಗಿ ಬಂದವಳಲ್ಲ. ಮಲ್ಲಿಕಾರ್ಜುನನನ್ನು ಮದುವೆಯಾಗಿ ಶ್ರೀಶೈಲಕ್ಕೆ ಸೊಸೆಯಾಗಿ ಬಂದವಳು.”
ಮಾತನ್ನೇನೂ ಆಡಲಾರದವನಾದ ಅರ್ಚಕ. ಶ್ರೀಶೈಲಕ್ಕೆ ಬರುವ ತಪಸ್ವಿಗಳನ್ನೇನೂ ಆತ ಕಾಣದವನಲ್ಲ. ಶ್ರೀಶೈಲ ಪರ್ವತದ ಗುಹೆಯಲ್ಲಿ ಅಲ್ಲಲ್ಲಿ ಸಾಧನೆಯಲ್ಲಿ ತೊಡಗಿರುವ ಸಾಧಕರನ್ನೂ ಆತ ಬಲ್ಲ. ಆದರೂ ಮಹಾದೇವಿಯ ಮಾತುಗಳನ್ನೂ ಮತ್ತು ಆ ಮಾತಿಗೆ ಮೀರಿದ ಆಚರಣೆಯ ಅರಿವನ್ನೂ ಸಾಕ್ಷಾತ್ತಾಗಿ ಕಂಡು ಪವಾಡದರ್ಶನವಾದಂತಾಯಿತು ಅರ್ಚಕನಿಗೆ ಮತ್ತು ಅಲ್ಲಿದ್ದವರಿಗೆ.
ಅರ್ಚಕನು ಚುಂಚರ ಕಡೆಗೆ ತಿರುಗಿ ಅವರ ಮಾತಿನಲ್ಲಿ ಎಲ್ಲವನ್ನೂ ವಿವರಿಸಿದ. ಆ ಮುಗ್ಧ ಚುಂಚುರು ಭಯಮಿಶ್ರಿತವಾದ ಗೌರವ ಭಾವನೆಯಿಂದ ಬಂದು ದೂರದಲ್ಲಿ ದಿಂಡುಗೆಡೆದರು ಮಹಾದೇವಿಯ ಎದುರು.
ಅರ್ಚಕ ಹೇಳಿದ ಮಹಾದೇವಿಗೆ :
“ಈ ಕಾಡುಜನ ಚುಂಚರು, ನಂಬಿದರೆ ಬಹಳ ಒಳ್ಳೆಯವರು. ತಮ್ಮ ಪ್ರಾಣವನ್ನು ಬೇಕಾದರೂ ಕೊಡಲು ಸಿದ್ಧರಾಗುತ್ತಾರೆ. ನಾನು ನಿಮ್ಮ ವಿಷಯವೆಲ್ಲವನ್ನೂ ಇವರಿಗೆ ಹೇಳಿದ್ದೇನೆ. ಈ ಕಾಡುಜನರಿಗೆಲ್ಲಾ ಮುಖಂಡ ಇವನು” ಎಂದು ಅವರಲ್ಲಿ ಪ್ರಧಾನವಾಗಿ ಕಾಣುತ್ತಿದ್ದ ಒಬ್ಬನನ್ನು ತೋರಿಸಿದ. ಅರ್ಚಕನ ಮಾತೇ ಮತ್ತೆ ಮುಂದುವರಿಯಿತು.
“ಇವನು ಹಾಕಿದ ಗೆರೆಯನ್ನು ಇವನ ಜನಾಂಗದವರಾರೂ ದಾಟುವುದಿಲ್ಲ. ಶ್ರೀಶೈಲ ಪ್ರಾಂತದ ತುಂಬಾ ಅಲ್ಲಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ಇವರು ವಾಸಿಸುತ್ತಿದ್ದಾರೆ. ನೀವು ಬರುವಾಗ ದಾರಿಯಲ್ಲಿ ಮೂರು ನಾಲ್ಕು ಕಡೆ ಇವರ ಗುಡಿಸಲುಗಳನ್ನು ನೋಡಿರಬಹುದು, ಇಲ್ಲಿ ಅರ್ಕೇಶ್ವರನ ಬಳಿಯಲ್ಲಿಯೇ ಇವರ ಒಂದು ಹಳ್ಳಿಯಿದೆ. ಕದಳಿಯ ವನದ ಸಮೀಪದಲ್ಲಿಯೂ ಇವರು ಇದ್ದಾರೆ....”