ಪುಟ:Kadaliya Karpoora.pdf/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬೦

ಕದಳಿಯ ಕರ್ಪೂರ

ಕೂಡಿಕೊಂಡಿದ್ದರು. ಸ್ವಲ್ಪ ಹೊತ್ತಾದ ಮೇಲೆ ಅವರೆಲ್ಲಾ ಬಳಿಗೆ ಬಂದು ಮಹಾದೇವಿಗೆ ತಮ್ಮ ಆಲೋಚನೆಯನ್ನು ಹೇಳಿದರು :

‘ಈಗಾಗಲೇ ಕತ್ತಲಾಗುತ್ತಿರುವುದರಿಂದ ನದಿಯನ್ನು ನಾಳೆ ಬೆಳಿಗ್ಗೆಯೇ ದಾಟುವುದು’ ಎಂದು ಅವರು ಹೇಳಿದುದು ಮಹಾದೇವಿಗೂ ಒಪ್ಪಿತವಾಯಿತು.

ಆ ರಾತ್ರಿ ನದಿಯ ದಡದ ಮರಳುಹಾಸಿಗೆಯೇ ಅವಳ ಮನೆಯಾಯಿತು. ಲಕ್ಷಾಂತರ ನಕ್ಷತ್ರಗಳು ಮಹಾದೇವಿಯ ಭವ್ಯವಾದ ಹಮರ್ಯ್‌ದ ಮಣಿಕಟ್ಟಿನಂತೆ ಮಿನುಗುತ್ತಿದ್ದವು.

ಮಹಾದೇವಿ ಮಲಗುವ ಸ್ಥಳವನ್ನು ನಿರ್ಧರಿಸಿದ ಚುಂಚರು ಅಲ್ಲಿಯ ಮರಳನ್ನು ಸರಿಗೊಳಿಸಿದ್ದರು. ಅಲ್ಲಿಂದ ಸ್ವಲ್ಪ ದೂರದಲ್ಲಿ ಎರಡು ಮೂರು ಕಡೆ ಕಟ್ಟಿಗೆಯನ್ನು ರಾಶಿಹಾಕಿದ್ದರು. ಮಹಾದೇವಿಗೆ ಅದೇಕೆಂಬುದು ತಿಳಿಯಲಿಲ್ಲ. ಕಾಡುಪ್ರಾಣಿಗಳಿಂದ ರಕ್ಷಿಸಿಕೊಳ್ಳುವುದಕ್ಕಾಗಿ ಎಂದು ಅವರು ಹೇಳಿದಾಗ ಅವರ ಮುಂಜಾಗ್ರತೆಗಾಗಿ ಮೆಚ್ಚಿದಳು.

ಅವರ ಸಂಶಯ ವ್ಯರ್ಥವಾದುದಾಗಿರಲಿಲ್ಲ. ಈ ಮಾತನ್ನು ಆಡುತ್ತಿರುವಂತೆಯೇ ಎದುರಿಗಿರುವ ಪರ್ವತದ ಬುಡದಲ್ಲಿ ವಿದ್ಯುತ್ತಿನ ಕೆಂಡಗಳಂತೆ ಹೊಳೆಯುತ್ತಿರುವ ಎರಡು ಕಣ್ಣುಗಳು ಮಾತ್ರ ಕಾಣುತ್ತಿದ್ದುವು. ಕ್ರಮೇಣ ಕಣ್ಣುಗಳು ಕೆಳಗಿಳಿದು ಬರತೊಡಗಿದುವು. ಉಸಿರು ಬಿಗಿಹಿಡಿದು ಚುಂಚುರು ಅತ್ತಲೇ ನೋಡುತ್ತಿದ್ದರು.

ಹುಲಿ ನೀರನ್ನು ಕುಡಿಯಲು ಹತ್ತಿರ ಹತ್ತಿರ ಬರುತ್ತಿತ್ತು. ನದಿಯ ಬಳಿಗೆ ಬಂದಿತು. ನೇರವಾಗಿ ಇವರ ಎದುರಿಗೇ, ಆದರೆ ಆಚೆಯ ದಡದಲ್ಲಿ ಬಂದು ನೀರನ್ನು ಕುಡಿದು ಮತ್ತೆ ನಿಧಾನವಾಗಿ ಬೆಟ್ಟವನ್ನು ಏರಿಹೋಯಿತು.

ಚುಂಚರು ಬೆಂಕಿ ಹೊತ್ತಿಸಿದರು. ಒಣಗಿದ ಕಟ್ಟಿಗೆಗಳನ್ನು ಆಶ್ರಯಿಸಿದ ಬೆಂಕಿ ಕತ್ತಲಿನಲ್ಲಿ ತನ್ನ ಕೆನ್ನಾಲಿಗೆಯನ್ನು ಚಾಚಿ ಧಗಧಗನೆ ಉರಿಯತೊಡಗಿತು. ಅದೇ ವೇಳೆಗೆ ಎಡಭಾಗದ ಪರ್ವತದ ಮೈಯನ್ನು ಕಾಡುಕಿಚ್ಚು ವ್ಯಾಪಿಸಿ ಹಬ್ಬತೊಡಗಿದ್ದುದು ಕಾಣಿಸಿತು. ಅಲ್ಲಿ ಕೆದರುವ ಕಿಡಿಗಳು ನಕ್ಷತ್ರಗಳಂತೆ ಕಾಣುತ್ತಿದ್ದುವು. ಅದರೊಡನೆ ಇಲ್ಲಿನ ಬೆಂಕಿ, ಸ್ಪರ್ಧೆ ಹೂಡಿದಂತೆ ತೋರುತ್ತಿತ್ತು.

ಬೆಂಕಿಯ ಮಧ್ಯದಲ್ಲಿ ಕುಳಿತ ಮಹಾದೇವಿಗೆ ತನ್ನದೇ ಆದ ವಚನ ನೆನಪಿಗೆ ಬಂದಿತು :

ಕಿಡಿಕಿಡಿ ಕೆದರಿದೊಡೆ, ಎನಗೆ ಹಸಿವು ತೃಷೆ ಅಡಗಿತೆಂಬೆನು ;

ಮುಗಿಲು ಹರಿದು ಬಿದ್ದೊಡೆ, ಎನಗೆ ಮಜ್ಜನಕ್ಕೆರೆದರೆಂಬೆನು ;