ಹಳ್ಳವನ್ನು ಸಮೀಪಿಸುತ್ತಿದ್ದಂತೆಯೇ ಹಳ್ಳದ ಆಚೆಯ ದಂಡೆಯಲ್ಲಿ ತನ್ನ ಗುಡಿಸಲಿನ ಬಳಿ ಇಬ್ಬರು ನಿಂತಿರುವುದು ಕಾಣಿಸಿತು. ಇನ್ನೂ ಅಚ್ಚರಿಯನ್ನುಂಟು ಮಾಡಿದುದೆಂದರೆ ಅವಳಲ್ಲಿ ಒಬ್ಬಳು ಸ್ತ್ರೀ ಎಂಬುದು. ತನ್ನನ್ನು ನೋಡಲು ಬಂದಿರುವ ಈ ಸ್ತ್ರೀಪುರುಷರಾರಿರಬಹುದೆಂಬುದು ಅವಳ ಊಹೆಗೂ ನಿಲುಕದ ವಿಷಯವಾಗಿತ್ತು. ಅದನ್ನೇ ಕುರಿತು ಆಲೋಚಿಸುತ್ತಿರುವಷ್ಟರಲ್ಲಿ ಬೆಟ್ಟವನ್ನಿಳಿದು ಹಳ್ಳದ ದಂಡೆಯನ್ನು ಸಮೀಪಿಸುತ್ತಿದ್ದಳು.
ಅತ್ತ ಆ ಸ್ತ್ರೀಯೂ ಮಹಾದೇವಿಯನ್ನು ಕಂಡೊಡನೆಯೇ ಉದ್ವೇಗವನ್ನು ತಾಳಲಾರದೆ ತಾನೇ ಹಳ್ಳವನ್ನು ದಾಟಿ ಮಹಾದೇವಿಯತ್ತ ಓಡತೊಡಗಿದಳು. ಮಹಾದೇವಿಯ ಕುತೂಹಲ ಕೊನೆಮುಟ್ಟುತ್ತಿರುವಷ್ಟರಲ್ಲಿ “ತಾಯೀ....” ಎಂದು ಕೂಗುತ್ತಾ ಬಂದು ಮಹಾದೇವಿಯ ಕಾಲಮೇಲೆ ಬಿದ್ದಳು ರಸವಂತಿ.
ಮಹಾದೇವಿ ತನ್ನ ಕಿವಿಯನ್ನು ತಾನೇ ನಂವಲಾರದವಳಾದಳು. ಅತಿ ಪರಿಚಿತ ಧ್ವನಿ; ಹೌದು. ಆದರೆ ಅದು ಇಲ್ಲಿ ಕೇಳಿಬರುವುದು ಹೇಗೆ ಸಾಧ್ಯ? ಅನುಮಾನದಿಂದ ಹಿಂದೆ ಸರಿಯುತ್ತಾ ಕೇಳಿದಳು :
“ಯಾರಮ್ಮ ನೀನು?”
“ನಾನಾರೆಂಬುದೂ ಮರೆತುಹೋಯಿತೇ, ತಾಯಿ?”
ಮಹಾದೇವಿ ರಸವಂತಿಯನ್ನು ಮರೆತಿರಲಿಲ್ಲ. ಆದರೆ ಪ್ರತ್ಯಕ್ಷವಾದರೂ ನಂಬಲಾರದಷ್ಟು ಅಸಂಭವಾಗಿತ್ತು ಆಕೆ ಇಲ್ಲಿ ಬರುವುದು. ಆದರೆ ಈಗ ಅದರಲ್ಲಿ ಸಂದೇಹವೇ ಉಳಿದಿರಲಿಲ್ಲ. ದಿಗ್ಭ್ರಮೆಗೊಂಡವಳಂತೆ ನಿಂತು ರಸವಂತಿಯನ್ನು ನೋಡುತ್ತಿದ್ದಳು.
ರಸವಂತಿ ಮತ್ತೆ ಕೇಳಿದಳು : “ಏಕೆ ತಾಯಿ, ನನ್ನ ಗುರುತು ಕೂಡ ಸಿಕ್ಕಲಿಲ್ಲವೇ?” ಧ್ವನಿಯಲ್ಲಿ ದೈನ್ಯತೆ ತುಂಬಿತ್ತು.
“ಮೇಲೇಳು ರಸವಂತಿ” ಎಂದು ಅವಳನ್ನು ಎತ್ತುತ್ತಾ : “ನಿನ್ನನ್ನು ಮರೆಯುವುದು ಸಾಧ್ಯವೆ? ಆದರೆ ನೀನು! ಇಲ್ಲಿ ? ಈಗ .... ಬಂದುದು?” ಅಚ್ಚರಿಯಿಂದ ಪ್ರಶ್ನೆ ತುಂಡುತುಂಡಾಗಿ ಹೊರಬಿತ್ತು.
“ಮತ್ತೊಮ್ಮೆ ತಮ್ಮನ್ನು ಕಾಣುವ ಭಾಗ್ಯ ಬಂದುದಕ್ಕಾಗಿ ನನಗಾಗಿರುವ ಸಂತೋಷ ಅಷ್ಟಿಷ್ಟಲ್ಲ, ತಾಯಿ!” ಎಂದಳು ರಸವಂತಿ ಸಾತ್ವಿಕ ಕಳೆಯೇ ಮೈವೆತ್ತಂತಿದ್ದ ಮಹಾದೇವಿಯನ್ನು ನೋಡುತ್ತಾ.
“ಅದು ಸರಿ, ರಸವಂತಿ .... ಆದರೆ ನೀನಿಲ್ಲಿಗೆ ಬಂದುದು ? ....”