ಪುಟ:Kadaliya Karpoora.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೩

ಬೆಳೆಯುವ ಬೆಳಕು

ಮಹಾದೇವಿ ಮತ್ತು ಶಂಕರಿ ರಾಜಬೀದಿಯಲ್ಲಿ ಸ್ವಲ್ಪ ದೂರ ನಡೆಯುತ್ತಿದ್ದಂತೆಯೇ ಇನ್ನೊಬ್ಬಳು ಗೆಳತಿ ಇವಳಿಗಾಗಿ ಕಾಯುತ್ತಿದ್ದುದು ಕಾಣಿಸಿತು.

“ಏನೇ, ಎಷ್ಟು ಹೊತ್ತು ಬರುವುದು? ಕಾದು ಕಾದು ಸಾಕಾಯಿತು.” ಕೇಳಿದಳು ಕಾಯುತ್ತಿದ್ದ ಗೆಳತಿ ಕಾತ್ಯಾಯಿನಿ.

“ನಾನೇನು ಮಾಡಲೇ, ಕಾತ್ಯಾಯಿನಿ? ಎಲ್ಲ ಈ ಮಹಾದೇವಿಯ ಆಟ. ಇವಳು ಬರುತ್ತಾಳೆಂದು ಕಾದು ಸಾಕಾಗಿ ಕೊನೆಗೆ ನಾನೇ ಹೋಗಿ ಎಬ್ಬಿಸಿಕೊಂಡು ಬಂದೆ.” ಹೇಳಿದಳು ಶಂಕರಿ.

“ಹೌದೇನೇ, ಮಹಾದೇವಿ! ಇಷ್ಟು ಹೊತ್ತು ಮಲಗಿದ್ದಿಯೇನೇ?”

“ಮಲಗಿರಲಿಲ್ಲ ಕಣೆ.” ಮಹಾದೇವಿಗೆ ಮಾತನಾಡಲು ಅವಕಾಶ ಕೊಡದೆ ತಾನೇ ಹೇಳಿದಳು ಶಂಕರಿ: “ನಿನ್ನೆ ಅವಳ ಮದುವೆಯಾಯಿತು. ಗಂಡನ ಪೂಜೆ ಮಾಡುತ್ತಿದ್ದಳು.” ನಗುತ್ತಿದ್ದಳು ಶಂಕರಿ.

“ಏನೇ ಅದು ಹುಡುಗಾಟ?” ಸಲುಗೆಯಿಂದ ಗದರಿದಳು ಮಹಾದೇವಿ.

“ಹುಡುಗಾಟವೇನು? ನೀನೇ ಹೇಳಲಿಲ್ಲವೇ?” ಎಂದು ಕಾತ್ಯಾಯಿನಿಯ ಕಡೆ ತಿರುಗಿ:

“ನೋಡೇ ಕಾತ್ಯಾಯಿನಿ, ನಿನ್ನೆ ಇವಳಿಗೆ ದೀಕ್ಷೆ ಆಯ್ತಲ್ಲ, ಆಗ ನಿನ್ನ ಮದುವೆಯ ಊಟ ಯಾವಾಗಮ್ಮ ಅಂತ ನಮ್ಮಪ್ಪ ಕೇಳಿದರೆ, ಈಕೆ ಏನು ಹೇಳಿದಳು ಗೊತ್ತೆ? ‘ಇದೇ ನನ್ ಮದುವೆ, ಮಲ್ಲಿಕಾರ್ಜುನನೇ ನನ್ನ ಗಂಡ. ಎರಡೂ ಊಟವನ್ನು ಈಗಲೇ ಮಾಡಿಬಿಡಿ!’ ಅನ್ನಬೇಕೇ :ಅದಕ್ಕೇ ಹೇಳಿದ್ದು, ನಿನ್ನೆ ಇವಳಿಗೆ ಮದುವೆಯಾಯ್ತು ಅಂಥ.” ಈ ವೇಳೆಗೆ ಇನ್ನೊಬ್ಬ ಗೆಳತಿ ಬರುತ್ತಿರುವುದನ್ನು ನೋಡಿ ಕಾತ್ಯಾಯಿನಿಂದ ದೃಷ್ಟಿ ಅತ್ತ ತಿರುಗಿತು:

“ಅಲ್ಲಿ ನೋದ್ರೇ, ದಾಕ್ಷಾಯಿಣಿ ಬರುತ್ತಿದ್ದಾಳೆ. ಅವಳಿಗೆ ನಿಜವಾಗಿಯೂ ಮದುವೆ, ಗೊತ್ತೇ?”

“ಹೌದೇನೇ?” ಶಂಕರಿ ಕೇಳಿದಳು.

ಆ ವೇಳೆಗೆ ದಾಕ್ಷಾಯಿಣಿ ಹತ್ತಿರ ಬಂದಿದ್ದಳು. ಇವರ ಹಿರಿಯ ಗೆಳತಿ ಆಕೆ. ಕೌಮಾರ್ಯವನ್ನು ದಾಟಿ ಯೌವನದಲ್ಲಿ ಪಾದಾರ್ಪಣೆ ಮಾಡುತ್ತಿರುವ ಎಳೆಯ ತರುಣಿ. ಅವಳು ಸಮೀಪಿಸುತ್ತಿದ್ದಂತೆಯೇ ಶಂಕರಿ ತುಂಟು ಧ್ವನಿಯಿಂದ ಕೇಳಿದಳು:

“ನಿನಗೆ ಮದುವೆಯಂತೆ, ಹೌದೇ ದಾಕ್ಷಾಯಿಣಿ?”

“ಯಾರೇ! ಹೇಳಿದವರು?” ದಾಕ್ಷಾಯಿಣಿಯ ಧ್ವನಿಯಲ್ಲಿ ಹುಸಿಮುನಿಸಿತ್ತು. “ಯಾರೋ ! ಹೌದೋ ಅಲ್ಲವೋ ಅದು ಹೇಳು.” ಕಾತ್ಯಾಯಿನಿ ಧ್ವನಿಗೂಡಿಸಿದಳು.