ಪುಟ:Kadaliya Karpoora.pdf/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫

ಬೆಳೆಯುವ ಬೆಳಕು

ಬಂದು, ಹಾಗೆ ಹೋಗುತ್ತದೆ. ನಾನು ಹೇಳಲಾಗದ ಆ ಭಾವಕ್ಕೆ ಪ್ರಭುದೇವರು ಸುಂದರವಾದ ವ್ಯಕ್ತರೂಪವನ್ನು ಕೊಟ್ಟಿದ್ದಾರೆ. `ನಿನಗಾಗಿ ಸತ್ತವರನಾರನೂ ಕಾಣೆ' ಎಂಬ ಮಾತಿನಲ್ಲಿಯೂ ಅಷ್ಟೆ. ಅವನನ್ನು ನಂಬಿದವರಿಗೆ ಸಾವಿಲ್ಲ. ಆದರೂ ಈ ಸಾವ ಕೆಡುವ ಗಂಡರೆನೇಕೆ ನಂಬಬೇಕೆಂಬುದೇ ನನ್ನ ಹಂಬಲ.

ಮಾತಿನ ದಿಕ್ಕು ತಾನರಿಯದಂತೆಯೇ ತನ್ನ ವಿಷಯದ ಕಡೆಗೆ ತಿರುಗಿತ್ತು. ಅದನ್ನು ಗುರುಗಳ ಮುಂದೆ ಹೇಳಿ ಹೃದಯವನ್ನು ಹಗುರ ಮಾಡಿಕೊಳ್ಳುವ ಉದ್ದೇಶದಿಂದಲೇ ಬಂದಿದ್ದಳು. ಹೇಳಿದಳು :

``ಆದರೂ ನನ್ನ ತಂದೆತಾಯಿಗಳು ನನ್ನ ಹಂಬಲವನ್ನು ಕೇಳುವಂತಿಲ್ಲ, ಗುರುಗಳೆ... ನಿಮಗೂ ಎಲ್ಲಾ ತಿಳಿದಿರಬೇಕು...

``ಹೌದಮ್ಮಾ, ಗೊತ್ತು. ಈ ಬೆಳಗ್ಗೆಯೂ ಬಂದಿದ್ದ ಓಂಕಾರ. ಎಲ್ಲವನ್ನೂ ಹೇಳಿದ.

``ನಿನ್ನೆ ರಾತ್ರಿ ಅವ್ವ ಹೇಳಿದಳು : ಇನ್ನು ನಾಲ್ಕಾರು ದಿನಗಳಲ್ಲಿ ನನ್ನನ್ನು ನೋಡುವುದಕ್ಕೆ ಬರುತ್ತಾರಂತೆ. ಆಗಲೇ ಎಲ್ಲವನ್ನೂ ಸಿದ್ಧಗೊಳಿಸಿರುವ ಹಾಗೆ ಕಾಣುತ್ತದೆ ಗುರುಗಳೆ. ಅದನ್ನು ಕೇಳಿ ರಾತ್ರಿಯ ನನ್ನ ತಳಮಳ ನನಗೇ ಗೊತ್ತು. ಅಲ್ಲದೆ... ಅನುಮಾನಿಸುತ್ತಾ ಹೇಳಿದಳು. ``ಆ ತಳಮಳದ ಸಂಕಟದಲ್ಲಿ ಒಂದೆರಡು ವಚನಗಳನ್ನು ಬರೆದಿದ್ದೇನೆ, ಗುರುಗಳೇ.

``ಹೌದೇ ! ಎಲ್ಲಿ ನೋಡೋಣ ! ಕುತೂಹಲಗೊಂಡರು ಗುರುಗಳು.

``ಅಲ್ಲಮ ಪ್ರಭುದೇವರ ವಚನಗಳನ್ನು ಕೇಳಿದ ಮೇಲೆ, ನನಗೆ ಅವುಗಳನ್ನು ತೆಗೆಯುವುದಕ್ಕೇ ಮನಸ್ಸು ಬಾರದಂತಾಗಿದೆ.

``ಹಿಮಾಲಯದ ಉತ್ತುಂಗ ಶಿಖರದಲ್ಲಿ ನಿಂತವರನ್ನು ಕಂಡು, ಅದರ ಬುಡದ ತಪ್ಪಲಿನಲ್ಲಿದ್ದು ಏರಲು ಸಾಹಸಪಡುತ್ತಿರುವವರು ಅಳುಕಬೇಕಾಗಿಲ್ಲ. ನಮಗೆ ಮಾರ್ಗ ತೋರಿಸುವ ಒಂದು ಶಕ್ತಿ ಮೇಲೇರಿ ಹೋಗಿದೆಯೆಂದು ಧೈರ್ಯಪಡಬೇಕು. ಆ ಮಹಾಸಿದ್ಧಿಪುರುಷನ ನೆರಳಿನಲ್ಲಿ ನಿನ್ನ ಚೈತನ್ಯ ರೂಪುಗೊಳ್ಳುತ್ತದೆ. ಎಲ್ಲಿ ಹೇಳು ನೋಡೋಣ, ನಿನ್ನ ವಚನಗಳನ್ನು.

ಮಹಾದೇವಿ ಮೊದಲು `ನಾನು ನಿನಗೊಲಿದೆ, ನೀನು ಎನಗೊಲಿದೆ' ಎಂಬ ವಚನಗಳನ್ನು ಹೇಳಿದಳು. ಗುರುಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅನಂತರ : `ಎನ್ನ ಮನವ ಮಾರುಗೊಂಡನವ್ವಾ' ಮತ್ತು `ಎರದ ಮುಳ್ಳಿನಂತೆ ಪರಗಂಡರೆನಗವ್ವಾ' ಎಂಬ ವಚನಗಳನ್ನು ವಾಚಿಸಿದಳು. ಕೇಳುತ್ತಾ ತಲೆದೂಗಿದರು ಗುರುಲಿಂಗರು :